ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಇರುವ ಮೋರಿಯೊಂದರಲ್ಲಿ ಸೋಮವಾರ ಬೆಳಿಗ್ಗೆ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಮೃತ ಮಗುವಿನ ಹೆಸರು, ವಿಳಾಸ, ಪೋಷಕರನ್ನು ಹುಡುಕುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮುನಿಕೃಷ್ಣ, ಮೃತ ಮಗುವನ್ನು ರುಚಿಕುಮಾರಿ (1) ಎಂದು ಗುರುತಿಸಲಾಗಿದೆ. ಬಿಹಾರ್ ರಾಜ್ಯದ ಸಹರ್ಸ ಜಿಲ್ಲೆಯ ಗೌಡಚಗಡ ಗ್ರಾಮದ ನಿವಾಸಿಗಳಾದ ಪ್ರಮೇಶ್ ಕುಮಾರ್ ಮತ್ತು ವಿಭಾಕುಮಾರಿ ದಂಪತಿಯ ಪುತ್ರಿ ರುಚಿಕುಮಾರಿ. ಕೂಲಿ ಕೆಲಸದ ನಿಮಿತ್ತ ಒಂದು ವಾರದ ಹಿಂದೆಯಷ್ಟೇ ಬಿಹಾರದಿಂದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬಂದಿದ್ದರು ಎನ್ನಲಾಗಿದೆ.
ಇಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಿಹಾರ್ ರಾಜ್ಯದವರೊಂದಿಗೆ ಇದ್ದರು. ರುಚಿಕುಮಾರಿ ತೀವ್ರತರವಾದ ಉಸಿರಾಟದ ಸಮಸ್ಯೆಯಿಂದಾಗಿ ಭಾನುವಾರ ಮೃತಪಟ್ಟಿದೆ. ಪೋಷಕರು ಹೊಸಬರಾಗಿದ್ದ ಕಾರಣ ಮೃತಮಗುವನ್ನು ಎಲ್ಲಿ ಸಂಸ್ಕಾರ ಮಾಡಬೇಕು ಎನ್ನುವುದು ತೋಚದೆ ಮೋರಿಯಲ್ಲಿನ ಅಂಚಿನಲ್ಲಿ ಶಾಲು ಹಾಸಿ ಮಲಗಿಸಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮಗುವಿನ ಕತ್ತಿನಲ್ಲಿದ್ದ ತಾಯಿತದಿಂದ ಸಿಕ್ತು ಸಂಪೂರ್ಣ ಮಾಹಿತಿ
ಮೃತ ಮಗುವಿನ ಕತ್ತಿನಲ್ಲಿ ಕಟ್ಟಲಾಗಿದ್ದ ತಾಯಿತವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಪೊಲೀಸರು, ಉತ್ತರ ಭಾರತದವರೇ ಹೆಚ್ಚಾಗಿ ಈ ತಾಯಿತಗಳನ್ನು ಕತ್ತಿನಲ್ಲಿ ಕಟ್ಟುವುದು ಎನ್ನುವುದರ ಆಧಾರದ ಮೇಲೆ ತನಿಖೆ ಕೈಗೊಂಡಿದ್ದರು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಭಾರತದ ಜನರು ವಾಸಮಾಡುವ ಪ್ರದೇಶಗಳಲ್ಲಿ ಮೃತಮಗುವಿನ ಫೋಟೋದೊಂದಿಗೆ ವಿಚಾರಣೆ ನಡೆಸಿದ್ದರು.
ಫೋಟೋ ಗಮನಿಸಿದ ಬಿಹಾರ್ ರಾಜ್ಯದವರು ಮಗುವಿನ ಪೋಷಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಮಗು ಅನಾರೋಗ್ಯದಿಂದ ಬಳಲುತ್ತಿದ್ದಾಗ ಬಾಶೆಟ್ಟಿಹಳ್ಳಿಯಲ್ಲಿನ ಖಾಸಗಿ ಆಸ್ಪತ್ರೆಗೆ ಪೋಷಕರು ಭಾನುವಾರ ಮಧ್ಯಾಹ್ನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮಗು ಸಂಜೆ ವೇಳೆಗೆ ಮೃತಪಟ್ಟಿದೆ. ಪೋಷಕರು ಮಗುವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿಕೊಂಡು ಹೋಗಿರುವ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿವೆ.