ಬಿಜೆಪಿ ಎಸ್‍ಸಿ ಮೋರ್ಚಾ ಮುಖಂಡ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಪ್ರಕರಣ- ಆರೋಪಿತರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಗಂಭೀರ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಎಸ್‍ಸಿ ಮೋರ್ಚಾ ಮುಖಂಡ ಪೃಥ್ವಿ ಸಿಂಗ್ ಅವರನ್ನು ಕಂಡು ಆರೋಗ್ಯ ವಿಚಾರಿಸಿದ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.

ನಂತರ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ವಿಪರೀತಕ್ಕೆ ಹೋಗುತ್ತಿದ್ದು, ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಎಂಎಲ್‍ಸಿ ಚನ್ನರಾಜ್ ಹಟ್ಟಿಹೊಳಿ, ಅವರ ಗನ್‍ಮ್ಯಾನ್ ಮತ್ತು ಇತರ ಸಹಚರರಿಂದ ಬಿಜೆಪಿ ಎಸ್‍ಸಿ ಮೋರ್ಚಾ ಮುಖಂಡ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಆಗಿದೆ ಎಂದು ಆರೋಪಿಸಿದರು.

ಈ ಪ್ರಕರಣವನ್ನು ಪೋಲಿಸರು ಪ್ರಭಾವಗಳಿಗೆ ಮಣಿಯದೇ ಗಂಭೀರವಾಗಿ ಪರಿಗಣಿಸಿ ಆರೋಪಿತರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ಅಧಿಕಾರ ಬಲದ ಮದದಿಂದ ಬೆಳಗಾವಿ ಭಾಗದಲ್ಲಿ ಗೂಂಡಾಗಿರಿ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದ್ದು, ಈ ಸಂಬಂಧ ಗೃಹ ಸಚಿವರು ಜಾಣ ಕುರುಡು ಪ್ರದರ್ಶಿಸಿದರೆ, ಬಿಜೆಪಿಯ ಹೋರಾಟದ ಬಿಸಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸ ಬಯಸುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ರೈತರು, ಹೋರಾಟಗಾರರು, ದಲಿತರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಾಗಳ ದೌರ್ಜನ್ಯದ ಜತೆಗೇ ಪೊಲೀಸರ ದಬ್ಬಾಳಿಕೆಯೂ ಹೆಚ್ಚುತ್ತಿದ್ದು ಈ ಸಂಬಂಧ ನಮ್ಮ ಪಕ್ಷ ಸದನದ ಒಳಗೆ ಹೊರಗೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಸದ್ಯ ಹಲ್ಲೆಗೊಳಗಾಗಿರುವ ಪೃಥ್ವಿ ಸಿಂಗ್  ಸ್ಥಳೀಯ ಪೊಲೀಸ್ ವ್ಯವಸ್ಥೆ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದು, ಆತಂಕದಲ್ಲಿರುವ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಿಸಲು ಗೃಹ ಇಲಾಖೆಯ ಉನ್ನತ ಅಧಿಕಾರಿಗಳು ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸುವೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ್ ಪಾಟೀಲ್, ಶಾಸಕರಾದ ಅಭಯ್ ಪಾಟೀಲ್,ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ, ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *