ಸಿಲ್ಕ್ಯಾರಾ ಸುರಂಗದಲ್ಲಿ17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ: ಸಿಹಿ ಹಂಚಿ‌ ಸಂಭ್ರಮಿಸಿದ‌ ಸ್ಥಳೀಯರು: ರಕ್ಷಣಾ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ ದೇಶದ ಜನ

ಉತ್ತರಾಖಂಡದ ಉತ್ತರಕಾಶಿ ಸಮೀಪ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳಿಂದ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ನಿರತವಾಗಿದ್ದ ರಕ್ಷಣಾ ತಂಡ ಸಂಪೂರ್ಣವಾಗಿ ಯಶಸ್ವಿಗೊಂಡಿದೆ. ಇದರೊಂದಿಗೆ ಇಡೀ ದೇಶ ನಿಟ್ಟುಸಿರು ಬಿಡುವಂತಾಗಿದೆ. 41 ಜನರ ಪ್ರಾಣ ರಕ್ಷಣೆಗಾಗಿ ಸತತ 400 ಗಂಟೆಗಳಿಂದ ಹಗಲಿರುಳೂ ಶ್ರಮಿಸಿದ ರಕ್ಷಣಾ ತಂಡದ ಛಲ, ಮಹತ್ತರದ ಸಾಧನೆಗೆ ದೇಶದ ಜನರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಕಾರ್ಮಿಕರ ಕುಟುಂಬಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

4 ಅಡಿಗಳಷ್ಟು ಅಗಲದ ಕಿರು ಸುರಂಗದ ಮೂಲಕ ಪೈಪ್‌ಗಳನ್ನು ಅಳವಡಿಸಿ, ಎಲ್ಲಾಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರಗೆಳೆಯಲಾಯಿತು.

ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ನಿರತವಾಗಿದ್ದ ರಕ್ಷಣಾ ತಂಡದ ಸಾಧನೆಯನ್ನು ಕೊಂಡಾಡಿದ‌ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರು.

ಏನಿದು ಸಿಲ್ಕ್ಯಾರಾ ಸುರಂಗ

ಕೇಂದ್ರ ಸರ್ಕಾರದ ಪ್ರತಿಷ್ಠಿತ ಚಾರ್‌ ಧಾಮ್‌ ಯೋಜನೆಯ ಭಾಗವೇ ಈ 4.5 ಕಿ.ಮೀ. ಉದ್ದದ ಸಿಲ್ಕ್ಯಾರಾದ ಸುರಂಗ. ಉತ್ತರಾಖಂಡ– ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ಎಲ್ಲಾ ಋತುವಿನಲ್ಲೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಿಲ್ಕ್ಯಾರಾ ಸುರಂಗ ಎಂದೇ ಕರೆಯಲಾಗುವ ಈ ರಸ್ತೆ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಂಡಿತು.

ಈ ಸುರಂಗವು ಸಿಲ್ಕ್ಯಾರಾದಿಂದ ದಾಂಡಲಗಾಂವ್‌ಗೆ ಸಂಪರ್ಕ ಕಲ್ಪಿಸಲಿದೆ. ಎರಡು ಲೇನ್‌ ಹೊಂದಿರುವ ಇದು ಚಾರ್‌ಧಾಮ್‌ ಯೋಜನೆಯಲ್ಲಿ ಅತ್ಯಂತ ಉದ್ದನೆಯ ಸುರಂಗವಾಗಿದೆ. ಸದ್ಯ ಸಿಲ್ಕ್ಯಾರಾದ ಕಡೆಯಿಂದ 2.4 ಕಿ.ಮೀ. ಹಾಗೂ ಮತ್ತೊಂದು ಬದಿಯಿಂದ 1.75 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣ ಅವಧಿ ಕಡಿತಗೊಳ್ಳಲಿದೆ. ಈ ಸುರಂಗದ ಕಾಮಗಾರಿಯನ್ನು ಹೈದರಾಬಾದ್ ಮೂಲದ ನವಯುಗ್ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದೆ.

ನ. 12ರಂದು ಸಿಲ್ಕ್ಯಾರಾ ಕಡೆಯ ಸುರಂಗದಲ್ಲಿನ 205 ಹಾಗೂ 260 ಮೀಟರ್‌ ಅಂತರದಲ್ಲಿ ಸುರಂಗ ಕುಸಿಯಿತು. 260 ಮೀಟರ್‌ ಕಡೆ ಇರುವ ಕಾರ್ಮಿಕರು ಸುರಂಗದೊಳಗೆ ಸಿಲುಕಿದರು. ಹೀಗಾಗಿ ಅವರು ಹೊರಬರಲು ಅವಕಾಶವೇ ಇಲ್ಲವಾಯಿತು. ಆದರೆ ಇವರು ಸಿಲುಕಿರುವ ಪ್ರದೇಶದಲ್ಲಿ ನೀರು ಹಾಗೂ ವಿದ್ಯುತ್ ಪೂರೈಕೆ ವ್ಯವಸ್ಥೆ ಇತ್ತು.‌

ಸುರಂಗ ಕುಸಿತ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಿಮಾಲಯದ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಈ ಸಮಸ್ಯೆ ಎದುರಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆತುರದಲ್ಲಿ ಕೈಗೊಂಡ ಕಾಮಗಾರಿಯಿಂದಲೂ ಇಂಥ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬಂದಿವೆ.

Leave a Reply

Your email address will not be published. Required fields are marked *