ವಿಶ್ವದಾದ್ಯಂತ ಹರಡಿರುವ ಹೆಚ್.ಐ.ವಿ/ಏಡ್ಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಡಿಸೆಂಬರ್ 01 ರಂದು ವಿಶ್ವ ಏಡ್ಸ್ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಅದರಂತೆಯೇ ಜಿಲ್ಲೆಯಲ್ಲಿ ಡಿಸೆಂಬರ್ 01 ರಂದು ಹೊಸಕೋಟೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲ್ಲಿ ವಿಶ್ವ ಏಡ್ಸ್ ದಿನವನ್ನು ಆಚರಿಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನಿಲ್ ಕುಮಾರ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
2023ರ ವಿಶ್ವ ಏಡ್ಸ್ ದಿನವನ್ನು “ಸಮುದಾಯಗಳು ಮುನ್ನಡೆಸಲಿ ” (let communities lead) ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು. ಕಾರ್ಯಕ್ರಮ ದಿನದಂದು ಹೊಸಕೋಟೆ ಟೌನ್ ನಲ್ಲಿ ಜಾಥಾ ಹಮ್ಮಿಕೊಂಡಿದ್ದು ಜನರಿಗೆ ಏಡ್ಸ್ ಕುರಿತು ಜಾಗೃತಿ ಮೂಡಿಸಲಾಗುವುದು. ಕಾಲೇಜುಗಳು, ಜನಸಂದಣಿ ಸ್ಥಳಗಳು, ಹೆಚ್ಚು ಸೋಂಕಿತರಿರುವ ಪ್ರದೇಶಗಳಲ್ಲಿ ಬೀದಿ ನಾಟಕಗಳ ಮೂಲಕ, ವಿವಿಧ ಜಾಗೃತಿ ಕಾರ್ಯಕ್ರಮ ಗಳನ್ನು ಏರ್ಪಡಿಸುವ ಮೂಲಕ ಏಡ್ಸ್ ಕುರಿತು ಪ್ರತಿ ವರ್ಷ ಜನಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ 2007 ರಿಂದ 2023 ರ ಅಕ್ಟೋಬರ್ ಮಾಹೆಯವರೆಗೆ 2336 ಪುರುಷರು, 1876 ಮಹಿಳೆಯರು ಹಾಗೂ 39 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 4251 ಹೆಚ್.ಐ.ವಿ ಸೋಂಕಿತರಿದ್ದಾರೆ.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 581 ಪುರುಷರು, 444 ಸ್ತ್ರೀಯರು, 02 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 1027 ಸೋಂಕಿತರಿದ್ದಾರೆ.
ದೇವನಹಳ್ಳಿ ತಾಲ್ಲೂಕಿನಲ್ಲಿ 497 ಪುರುಷರು, 385 ಸ್ತ್ರೀಯರು, 02 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 884 ಸೋಂಕಿತರಿದ್ದಾರೆ.
ಹೋಸಕೋಟೆ ತಾಲ್ಲೂಕಿನಲ್ಲಿ 733 ಪುರುಷರು, 600 ಸ್ತ್ರೀಯರು, 04 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 1337 ಸೋಂಕಿತರಿದ್ದಾರೆ.
ನೆಲಮಂಗಲ ತಾಲ್ಲೂಕಿನಲ್ಲಿ 525 ಪುರುಷರು , 447 ಸ್ತ್ರೀಯರು, 31 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 1003 ಸೋಂಕಿತರಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ನಾಗೇಶ್ ಉಪಸ್ಥಿತರಿದ್ದರು.