ಗುರುಕುಲ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕ ಕ್ರೀಡಾಕೂಟ: 595 ಅಂಕ ಪಡೆದ ಬ್ಲ್ಯೂ ಹೌಸ್ ಗೆ ಸಮಗ್ರ ಚಾಂಪಿಯನ್ ಪಟ್ಟ

ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ 2023-24ನೇ ಸಾಲಿನ ಗುರುಕುಲ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ 1000 ವಿದ್ಯಾರ್ಥಿಗಳ ಪೈಕಿ 650 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಕಿರಿಯ ಬಾಲಕರ ವಿಭಾಗದಲ್ಲಿ 7ನೇ ತರಗತಿಯ  ಎಸ್.ಆರ್.ಧೃವನ್(ಅಗ್ನಿ) ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ಯುಕ್ತಾಶ್ರೀ (ಬ್ರಹ್ಮೋಸ್) ಚಾಂಪಿಯನ್ ಪ್ರಶಸ್ತಿ ಪಡೆದರು.

ಹಿರಿಯ ಬಾಲಕರ ವಿಭಾಗದಲ್ಲಿ 9ನೇ ತರಗತಿಯ ಎನ್.ಎಸ್.ದಿಶಾಂತ್( ಅಗ್ನಿ), ಬಾಲಕಿಯರ ವಿಭಾಗದಲ್ಲಿ 9ನೇ ತರಗತಿಯ ಕೀರ್ತನಾ ಜೆ.ಗೌಡ ಅವರು ಹೆಚ್ಚು ಪದಕಗಳನ್ನು ಪಡೆಯುವ ಮೂಲಕ ವೈಯಕ್ತಿಕ ಚಾಂಪಿಯನ್ ಆಗಿ ಸಂಭ್ರಮಿಸಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ‌ಮನೋಭಾವ ತುಂಬುವ ಸಲುವಾಗಿ ಕೆಂಪು, ಹಳದಿ, ಹಸಿರು ಹಾಗೂ ನೀಲಿ ಬಣ್ಣದ ಸಮವಸ್ತ್ರಧಾರಿಗಳ  ತಂಡಗಳನ್ನು ರಚಿಸಲಾಗಿತ್ತು. ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಪದಕಗಳೊಂದಿಗೆ 595 ಅಂಕ ಪಡೆದ ಬ್ಲ್ಯೂ ಹೌಸ್ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಯೆಲ್ಲೂ ಹೌಸ್ 570 ಅಂಕಗಳೊಂದಿಗೆ ರನ್ನರ್ಸ್ ಅಪ್ ಗೆ ತೃಪ್ತಿಪಟ್ಟುಕೊಂಡಿತು. ಕ್ರಮವಾಗಿ 3 ಮತ್ತು 4ನೇ ಸ್ಥಾನವನ್ನು ಗ್ರೀನ್ ಹೌಸ್ ತಂಡ (505 ಅಂಕ), ರೆಡ್ ಹೌಸ್ ತಂಡ(500 ಅಂಕ) ಪಡೆದುಕೊಂಡಿತು.

ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್.ರಮೇಶ್, ಉಪಾಧ್ಯಕ್ಷ ಎಂ.ಎಚ್.ಗಂಗಮಾರೇಗೌಡ, ಪ್ರಧಾನ ಕಾರ್ಯದರ್ಶಿ ಎ.ಎನ್.ಲೋಕೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಹೃತಿಕ್ ನರೇಂದ್ರ, ಖಜಾಂಚಿ ಕೆ.ಜಿ.ಶ್ರೀನಿವಾಸಮೂರ್ತಿ, ಪ್ರಾಂಶುಪಾಲ ಲೋಕೇಶ್, ಉಪ ಪ್ರಾಂಶುಪಾಲ ಶರಣ್ ಅವರು ವೇಳೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕ್ರೀಡಾಕೂಟದ ಉದ್ಘಾಟನೆಯನ್ನು ಕೊಂಗಾಡಿಯಪ್ಪ ಪಿಯು ಕಾಲೇಜಿನ‌ ನಿವೃತ್ತ ಪ್ರಾಂಶುಪಾಲರಾದ ಮೇಜರ್ ಎಸ್.ಮಹಾಬಲೇಶ್ವರ್ ಅವರು ನೆರವೇರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಕ್ರೀಡಾ ಜ್ಯೋತಿ ಪ್ರಜ್ವಲನ, ಪುಟಾಣಿ ಮಕ್ಕಳ ಮ್ಯಾರಥಾನ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾ ಮಹೋತ್ಸವಕ್ಕೆ ಮೆರಗು ತಂದವು.

ವಾರ್ಷಿಕ ಕ್ರೀಡಾಕೂಟದಲ್ಲಿ ಹೊರಾಂಗಣ ಕ್ರೀಡೆಗಳಾದ ಖೋ ಖೋ, ಕಬ್ಬಡಿ, ವಾಲಿಬಾಲ್, ಮ್ಯೂಸಿಕಲ್ ಚೇರ್, ಥ್ರೋಬಾಲ್, ರಿಲೇ, ಓಟದ ಸ್ಪರ್ಧೆ, ಲಾಂಗ್ ಜಂಪ್, ಹೈ ಜಂಪ್, ಗುಂಡು ಎಸೆತ, ತಟ್ಟೆ ಎಸೆತ ಸೇರಿದಂತೆ ಒಳಾಂಗಣ ಕ್ರೀಡೆಗಳಾದ ಶೆಟಲ್ ಬ್ಯಾಡ್ಮಿಂಟನ್  ನಡೆಯಿತು.

ಶಾಲೆಯ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಒಟ್ಟು 1000 ಮಂದಿ ವಿದ್ಯಾರ್ಥಿಗಳು ಬಹಳ ಉತ್ಸುಕದಿಂದ ಭಾಗವಹಿಸಿದ್ದರು. ಅದರಲ್ಲಿ 650 ಮಂದಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಗೆದ್ದು ಪ್ರಶಸ್ತಿಗಳಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ ಎಂದು ಶಾಲಾ ಪ್ರಾಂಶುಪಾಲ ಲೋಕೇಶ್ ಮಾಧ್ಯಮಗಳಿಗೆ ತಿಳಿಸಿದರು.

ಎರಡು ದಿನಗಳ ಕ್ರೀಡಾಕೂಟವು ಆರೋಗ್ಯಕರ ಹಾಗೂ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪೋಷಕರು, ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿ, ಸಿಬ್ಬಂದಿಗೆ ಧನ್ಯವಾದ ತಿಳಿಸಿದರು.

ಉಪ ಪ್ರಾಂಶುಪಾಲರಾದ ಶರಣ್ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ. ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಕ್ರೀಡಾ ಹಿನ್ನೆಲೆ ಹೊಂದಿರುವುದರಿಂದ ಮಕ್ಕಳ ಸಾಧನೆಗೆ ಹೆಚ್ಚು ಸ್ಫೂರ್ತಿ ಸಿಗುತ್ತಿದೆ. ಕಳೆದ ವರ್ಷ‌ ಶಾಲೆಯ ವಿದ್ಯಾರ್ಥಿಗಳು ಬಿಹಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ‌ ಭಾಗವಹಿಸಿ ಶಾಲೆಯ ಕೀರ್ತಿಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದರು. ಈ ವರ್ಷ ಕೂಡ ಶಾಲೆಯ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಸ್ಸಾಂನಲ್ಲಿ ನಡೆಯುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *