ವಿಶ್ವ ವಿಕಲಚೇತನರ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್

2023 ರ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ  ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ‌ ಕಛೇರಿ ಸಭಾಂಗಣದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ-2023 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಸೆಂಬರ್ 3 ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾಡಳಿತ ಭವನದಲ್ಲಿರುವ  ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಶಿಷ್ಠಾಚಾರದಂತೆ ಆಚರಿಸಲಾಗುವುದು. ಗ್ರಾಮೀಣ ಪುನರ್ವಸತಿ ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರನ್ನು  ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆ, ವ್ಯಕ್ತಿಗಳಿಗೆ ದಿನಾಚರಣೆಯ ದಿನ ಅಭಿನಂದಿಸಲು ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ವಿಕಲಚೇತನರ ನೋಡಲ್ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ತಾಲ್ಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ ವಿಕಲಚೇತನರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ವಿಕಲಚೇತನರ ಪಟ್ಟಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಅಗತ್ಯ ಕ್ರಮವಹಿಸುವಂತೆ ಎಲ್ಲಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು.

ದೇವನಹಳ್ಳಿ ಶಾಸಕರ ಅನುದಾನದಲ್ಲಿ ಮಂಜೂರಾದ 09 ಜನ ದೈಹಿಕ ವಿಕಲಚೇತನರಿಗೆ ಸಾಂಕೇತಿಕವಾಗಿ ಯಂತ್ರಚಾಲಿತ ದ್ವಿಚಕ್ರ ಮೋಟಾರು ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ, ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಹಾಗೂ ಕಾಯ್ದೆ ಕಾನೂನುಗಳ ಬಗ್ಗೆ ದಿನಾಚರಣೆಯ ದಿನದಂದು ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ವಿಕಲಚೇತನರಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಾಯಕ ನಿರ್ದೇಶಕರು, ತಾಲ್ಲೂಕು ಮಟ್ಟದ ವಿಕಲಚೇತನರ ನೋಡಲ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *