ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿಯ ಸದಸ್ಯರ ಜಿಲ್ಲಾ ಭೇಟಿ: ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ

ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಸದಸ್ಯರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಸ್ಥಳಗಳಿಗೆ  ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿಯಲ್ಲಿ ವಿವಿಧ ರಾಜ್ಯಗಳ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಸದಸ್ಯರಾಗಿರುತ್ತಾರೆ. ಲೋಕಸಭಾ ಸದಸ್ಯರಾದ ತಳಾರಿ ರಂಗಯ್ಯ, ಗೀತಾಬೇನ್  ವಜಾಸಿಂಗ್ ಬಾಯ್ ರಥ್ವಾ, ಮಹಮ್ಮದ್ ಜಾವೇದ್, ಎ.ಕೆ ಪಿ ಚಿನರಾಜ್, ವಿವೇಕ್ ನಾರಾಯಣ್, ಜನಾರ್ದನ ಮಿಶ್ರ ಹಾಗೂ ರಾಜ್ಯ ಸಭಾ ಸದಸ್ಯರಾದ ಮಹಮ್ಮದ್ ಅಬ್ದುಲ್ಲಾ, ಅಜಯ್ ಪ್ರತಾಪ್ ಸಿಂಗ್ ಸೇರಿ 8 ಜನ ಸಂಸದರು ಹಾಗೂ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಜಂಟಿ ಕಾರ್ಯದರ್ಶಿ ಡಿ.ಆರ್ ಶೇಖರ್ ಒಳಗೊಂಡ 9 ಜನ ಸದಸ್ಯರ ತಂಡ  ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮಕ್ಕೆ ಸಮಿತಿ ಸದಸ್ಯರನ್ನು  ಜಿಲ್ಲಾಧಿಕಾರಿ ಡಾ.ಶಿವಶಂಕರ್ ಎನ್ ಅವರು ಆತ್ಮೀಯವಾಗಿ ಬರಮಾಡಿಕೊಂಡು, ಸ್ವಾಗತಿಸಿ ಜಿಲ್ಲೆಯ ಬಗ್ಗೆ ಮಾಹಿತಿ ನೀಡಿದರು.ಸಂಜೀವಿನಿ ಸಂಘ ಮಹಿಳೆಯರು ತಯಾರಿಸಿದ  ಉತ್ಪನ್ನಗಳ ಮಾರಾಟ ವೀಕ್ಷಿಸಿದ ತಂಡವು, ನಂತರ ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಯೋಜನೆಗಳ ಪ್ರಗತಿ ಮಾಹಿತಿಯನ್ನು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್ ಅವರು ಪ್ರದರ್ಶಿಸಿದ ಪಿ.ಪಿ.ಟಿ ಮೂಲಕ ಮಾಹಿತಿ ಪಡೆದುಕೊಂಡರು. ಕನ್ನಮಂಗಲ ಗ್ರಾಮಪಂಚಾಯಿತಿ ಆವರಣದಲ್ಲಿ ಇರುವ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ವೀಕ್ಷಿಸಿದರು.

ನಂತರ ಜಾಲಿಗೆ ಗ್ರಾಮ ಪಂಚಾಯಿತಿಯ ತಿಂಡ್ಲು ಗ್ರಾಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ರಾಜ ಕಾಲುವೆ ಯನ್ನು ವೀಕ್ಷಿಸಿದರು. ಜುಟ್ಟನಹಳ್ಳಿಯಲ್ಲಿ  ಸಂಜೀವಿನಿ ಸಂಘ ಮಹಿಳೆಯರು ನಡೆಸುತ್ತಿರುವ ಬಟ್ಟೆ ಅಂಗಡಿ ಹಾಗೂ ಗ್ರಾಮ ಪಂಚಾಯಿತಿಯ 15 ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾದ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.

ಮಂಡಿಬೆಲೆ ಗ್ರಾಮ ಪಂಚಾಯಿತಿಯ ಮಂಡಿಬೆಲೆ ಗ್ರಾಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಸಸಿ ನೆಡುವ ಯೋಜನೆಯಡಿ ನಿರ್ಮಿಸಲಾಗಿರುವ ಶ್ರೀಗಂಧ ಮರಗಳ ನೆಡು ತೊಪುನ್ನು ವೀಕ್ಷಿಸಿದರು.

ಬೆಟ್ಟಕೋಟೆ ಗ್ರಾಮ ಪಂಚಾಯಿತಿಯ ರಾಯಸಂದ್ರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಯೋಜನೆಯಡಿ ಬೆಳೆಸಿದ ದೇವನಹಳ್ಳಿಯ ಪ್ರಸಿದ್ಧ ಹಣ್ಣಾದ ಚಕ್ಕೊತ ಹಣ್ಣಿನ ಗಿಡಗಳನ್ನು ಪರಿಶೀಲಿಸಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಯನ್ನು ವೀಕ್ಷಿಸಿದರು. ಬೆಟ್ಟಕೋಟೆಯಲ್ಲಿ  ರೇಷ್ಮೆ ಇಲಾಖೆಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಹಿಪ್ಪುನೇರಳೆ ಹೊಸನಾಟಿ, ನರ್ಸರಿ, ಹಿಪ್ಪುನೇರಳೆ ಮರ ಪದ್ಧತಿಯನ್ನು ಪರಿಶೀಲಿಸಿ, ರೇಷ್ಮೆಗೂಡಿನಿಂದ ತಯಾರಿಸಲಾದ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ , ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರು ಪವನ್ ಕುಮಾರ್ ಮಾಲಪಟಿ, ಪಂಚಾಯತ್ ರಾಜ್ ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಶಿವಶಂಕರ್. ಎನ್,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎನ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಸೇರಿದಂತೆ ಪಂಚಾಯತ್ ರಾಜ್ ಆಯುಕ್ತಾಲಯದ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *