ರಾಹುಲ್-ಹಾರ್ದಿಕ್ ಜೊತೆಯಾಟಕ್ಕೆ ಒಲಿದ ಏಕದಿನ ಸರಣಿ!

 

ಕೊಲ್ಕತ್ತಾ: ಹೂಗ್ಲಿ ನದಿಯ ದಡದಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಎರಡು ತಂಡಗಳ ಬೌಲರ್ ಗಳು ಪಾರಮ್ಯದ ನಡುವೆಯೂ ಸಹ ಕನ್ನಡಿಗ ಕೆ. ಎಲ್. ರಾಹುಲ್ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಉತ್ತಮ ಜೊತೆಯಾಟದಿಂದಾಗಿ ಭಾರತ ಏಕದಿನ ಸರಣಿಯನ್ನು ತನ್ನದಾಗಿಸಿಕೊಳ್ಳವ ಮೂಲಕ 2-0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡದ ಆರಂಭ ಉತ್ತಮವಾಗಿತ್ತು, ಪದಾರ್ಪಣೆ ಪಂದ್ಯವಾಡಿದ ನವನಿಂದು ಫರ್ನಾಂಡೊ (50) ರನ್ ಗಳಿಸಿ ಭದ್ರ ಬುನಾದಿ ಹಾಕಿದರು, ಆವಿಶ್ಕೋ ಫರ್ನಾಂಡೊ (20) ರನ್ ಗಳಿಸಿದ್ದ ಸಂದರ್ಭದಲ್ಲಿ ಮಹಮ್ಮದ್ ಸಿರಾಜ್ ವಿಕೆಟ್ ಉರುಳಿಸಿ ಆಘಾತ ನೀಡಿದರು.

ನಂತರ ಬಂದ ಕುಶಾಲ್ ಮೆಂಡಿಸ್ (34) ರನ್ ಗಳಿಸಿದರೆ ಕೆಳಕ್ರಮಾಂಕದ ಆಟಗಾರ ವೆಲ್ಲಾಗೆ (32) ರನ್ ಗಳಿಸುವ ಮೂಲಕ ತಂಡದ ಮೊತ್ತ 200 ರನ್ ಗಡಿ ದಾಟಿಸಿದರು, ವನಿಂದು ಹಸರಂಗ, ಕರುಣಾರತ್ನೆ ಹಾಗೂ ಬೌಲರ್ ರಜಿತ ತಂಡಕ್ಕೆ ಅತ್ಯಲ್ಪ ಕಾಣಿಕೆ ನೀಡಿದರು.

ಭಾರತದ ಪರವಾಗಿ ಕುಲದೀಪ್ ಯಾದವ್ ಹಾಗೂ ಮಹಮ್ಮದ್ ಸಿರಾಜ್ ತಲಾ ಮೂರು ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಆಘಾತ ನೀಡಿದರು, ವೇಗದ ಬೌಲಿಂಗ್ ಮೂಲಕ ಪ್ರವಾಸಿ ಪಡೆಯನ್ನು ಕಾಡಿದ ಉಮ್ರಾನ್ ಮಲ್ಲಿಕ್ ಎರಡು ವಿಕೆಟ್ ಹಾಗೂ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.

216 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಜೋಡಿ ಉತ್ತಮ ರನ್ ಗಳಿಸಿ ಭರವಸೆ ಮೂಡಿಸಿದ್ದರು, ಆದರೆ ತಂಡದ ಮೊತ್ತ 33 ರನ್ ಗಳಿಸಿದ್ದ ಸಂದರ್ಭದಲ್ಲಿ ಕರಣರತ್ನೆ ಎಸೆದ ಚೆಂಡನ್ನು ಅರಿಯುವಲ್ಲಿ ವಿಫಲವಾದ ನಾಯಕ ರೋಹಿತ್ ಶರ್ಮಾ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದರು.

ನಾಯಕ ರೋಹಿತ್ ನಿರ್ಗಮಿಸಿದ ನಂತರ ತಂಡದ ಮೊತ್ತಕ್ಕೆ 8 ರನ್ ಸೇರುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು, ಕಳೆದ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ನಾಲ್ಕು ರನ್ ಗಳಿಸಿ ಲಹಿರುಗೆ ಕ್ಲೀನ್ ಬೌಲ್ಡ್ ಆದರು.

ನಂತರ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಕೆ. ಎಲ್. ರಾಹುಲ್ ಜೋಡಿ ಎಚ್ಚರಿಕೆಯಿಂದ ರನ್ ಕಲೆಹಾಕುತ್ತಿದ್ದ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ (28) ರಜಿತಾ ಬೀಸಿದ ಎಲ್ ಬಿ ಬಲೆಗೆ ಬಿದ್ದರು, 86 ರನ್‌ಗಳಿಸಿ 4 ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದಾದ ಕೆ. ಎಲ್. ರಾಹುಲ್ ನಾಲ್ಕು ಬೌಂಡರಿ ಗಳಿಸಿ (64) ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕು ಬೌಂಡರಿ ಬಾರಿಸಿ (36) ರನ್ ಗಳಿಸಿ ಉತ್ತಮ ಜೊತೆಯಾಟದೊಂದಿಗೆ 75 ರನ್ ಗಳಿಸಿ ತಂಡವನ್ನು ಗೆಲುವಿನ ಕಡೆ ಕೊಂಡೊಯ್ದುರು.

ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಹಾರ್ದಿಕ್ ಪಾಂಡ್ಯ ಕರುಣಾರತ್ನೆಗೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಆಲ್ ರೌಂಡರ್ ಅಕ್ಷರ್ ಪಟೇಲ್ (21) ಹಾಗೂ ಬೌಲಿಂಗ್ ನಲ್ಲಿ ಮಿಂಚಿದ್ದ ಕುಲದೀಪ್ ಎರಡು ಬೌಂಡರಿ ಬಾರಿಸಿ (10) ರನ್ ಗಳಿಸಿ ರಾಹುಲ್ ಜೊತೆಗೆ ಗೆಲುವಿನ ದಡ ಸೇರಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *