ಸಾರ್ವತ್ರಿಕ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗೆ ಹೊಸ ಮಸೂದೆಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಪಬ್ಲಿಕ್‌ ಎಗ್ಸಾಮಿನೇಷನ್‌ (ಭ್ರಷ್ಟಾಚಾರ ಮತ್ತು ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ–2023ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಧೇಯಕವನ್ನು ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್.ಡಿ.ಎ ಸೇರಿದಂತೆ ಸರ್ಕಾರದ ಹಲವು ನೇಮಕಾತಿಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದವು ಎಂದು ಆರೋಪ ಮಾಡಿದ್ದಾರೆ.

ಇದರಿಂದ ವರ್ಷಾನುಗಟ್ಟಲೆಯಿಂದ ಪರೀಕ್ಷೆಗೆ ತಯಾರಿ ನಡೆಸಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ್ದ ಸಾವಿರಾರು ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದರು. ಇಂತಹ ಅಕ್ರಮ, ಅವ್ಯವಹಾರವನ್ನು ತಡೆಗಟ್ಟಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ನೂತನ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದೇವೆ ಎಂದರು.

ಇದರ ಮೊದಲ ಹಂತವಾಗಿ ವಿಧೇಯಕವನ್ನು ಸಚಿವ ಸಂಪುಟದ ಮುಂದಿಟ್ಟು ಅನುಮೋದನೆಯನ್ನು ಪಡೆದಿದ್ದೇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಷ್ಟೇ ಅಲ್ಲ, ಅರ್ಹರಿಗೆ ಮಾತ್ರ ಉದ್ಯೋಗ ಸಿಗಬೇಕು ಎಂಬುದೂ ನಮ್ಮ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *