ಆಸೀಸ್ ಮಣಿಸಿ ವಿಶ್ವಕಪ್ ಜಯಿಸುವ ತವಕದಲ್ಲಿ ಟೀಂ ಇಂಡಿಯಾ

ಹನ್ನೆರೆಡು ವರ್ಷಗಳ ನಂತರ ಮತ್ತೊಮ್ಮೆ ಏಕದಿನ ವಿಶ್ವಕಪ್ ಗೆಲ್ಲಲು, ಹತ್ತು ವರ್ಷಗಳ ನಂತರ ಐಸಿಸಿ ಟ್ರೋಫಿ ಗೆಲ್ಲುವ ಅದ್ಭುತ ಅವಕಾಶ ಟೀಂ ಇಂಡಿಯಾದ ಮುಂದಿದ್ದು ಆಸೀಸ್ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಅವಕಾಶ ಒದಗಿ ಬಂದಿದೆ.

ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸು ಮಾಡಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ, ನ್ಯೂಜಿಲ್ಯಾಂಡ್ ವಿರುದ್ಧ 2019 ರ ಸೆಮಿಫೈನಲ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದನ್ನು ಈ ಬಾರಿಯ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಕೀವೀಸ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡು ಫೈನಲ್ ತಲುಪಿದೆ.

2023 ರ ವಿಶ್ವಕಪ್ ನಲ್ಲಿ ಒಂದೂ ಪಂದ್ಯವನ್ನು ಸೋಲದೆ ಫೈನಲ್ ತಲುಪಿರುವ ಭಾರತ ತಂಡ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲುವು ಸಾಧಿಸಿ 2003ರ ಏಕದಿನ ಫೈನಲ್ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ .

2003 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಂದಿನ ಭಾರತ ತಂಡದ ನಾಯಕರಾದ ಸೌರವ್ ಗಂಗೂಲಿ ತಂಡದ ವಿರುದ್ಧ ನಾಯಕ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು ಆಗ ಭಾರತ ತಂಡ ರನ್ನರ್ ಆಫ್ ಗೆ ತೃಪ್ತಿಪಟ್ಟುಕೊಂಡಿತ್ತು.

ಇದೀಗ ಅಂತಹುದೇ ಸಮಯ ಒದಗಿಬಂದಿದ್ದು ನಾಯಕ ರೋಹಿತ್ ಶರ್ಮಾ ಆಸೀಸ್ ವಿರುದ್ಧ ಗೆಲುವು ಸಾಧಿಸುವ ತವಕದಲ್ಲಿದ್ದಾರೆ, ಮೊದಲೆರಡು ಪಂದ್ಯದಲ್ಲಿ ಸೋತರು ಸಹ ಉಳಿದ ಪಂದ್ಯಗಳಲ್ಲಿ ಗೆದ್ದು ಫೈನಲ್ ಪ್ರವೇಶಿಸಿರುವ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತದ ತಂಡದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಅದ್ಭುತ ಆರಂಭವನ್ನು ನೀಡುತ್ತಿದ್ದು ನಂತರ ಬರುವ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ.

ಭಾರತದ ಬೌಲಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಮೊಹಮ್ಮದ್ ಶಮಿ ಅತ್ಯಧಿಕ ವಿಕೆಟ್ ಪಡೆದು ಮಿಂಚಿದರೆ ಸಿರಾಜ್, ಬುಮ್ರಾ, ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಸೀಸ್ ಬ್ಯಾಟಿಂಗ್ ಪಡೆಯನ್ನು ಕಾಡಲಿದ್ದಾರೆ.

ಆಸ್ಟ್ರೇಲಿಯಾದ ಪರವಾಗಿ ಡೇವಿಡ್ ವಾರ್ನರ್, ಮಿಚೆಲ್ ಮಾಷ್೯, ಗ್ಲೇನ್ ಮ್ಯಾಕ್ಸ್ವಲ್, ಸ್ಮಿತ್ ಹಾಗೂ ಲಬುಶನಗೆ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು ವೇಗಿಗಳಾದ ಹೆಜಲ್ವುಡ್, ಸ್ಟಾಕ್೯ ಹಾಗೂ ಪ್ಯಾಟ್ ಕಮ್ಮಿನ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ನವೆಂಬರ್ 19 ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಉಪ ಪ್ರಧಾನಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ, ವಿಶ್ವಕಪ್ ಚಾಂಪಿಯನ್ ಆದ ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಎಲ್ಲಾ ನಾಯಕರು ಹಾಜರಿ ಇರಲಿದ್ದಾರೆ.

Leave a Reply

Your email address will not be published. Required fields are marked *