ಮುಕ್ಕಡಿಘಟ್ಟ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳ ಆಗ್ರಹ

ತಾಲೂಕಿನ‌ ತೂಬಗೆರೆ ಹೋಬಳಿಯ ಮುಕ್ಕಡಿಘಟ್ಟ ಹಾಗೂ ಕಲ್ಲುಕೋಟೆ ಗ್ರಾಮಕ್ಕೆ ಸೂಕ್ತ ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು KSRTC ಬಸ್‌ ಡಿಪೊ ವ್ಯವಸ್ಥಾಪಕರಿಗೆ‌ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು.

ಮಂಗಳವಾರ ಮುಕ್ಕಡಿಘಟ್ಟ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳು ಜೂನಿಯರ್ ಕಾಲೇಜು ಎದುರಿನ ಬಸ್ ಡಿಪೊಗೆ ಆಗಮಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ತಾಲೂಕಿನ ಮುಕ್ಕಡಿಘಟ್ಟ, ಕಲ್ಲುಕೋಟೆ ಸೇರಿದಂತೆ‌ ಸುತ್ತಲಿನ ಗ್ರಾಮಗಳಿಂದ‌ ದೊಡ್ಡಬಳ್ಳಾಪುರದ ಕಾಲೇಜು, ತೂಬಗೆರೆಯ ಶಾಲೆಗೆ 50-60 ವಿದ್ಯಾರ್ಥಿಗಳು‌ ಸಂಚರಿಸುತ್ತಾರೆ. ಆದರೆ, ಗ್ರಾಮಕ್ಕೆ‌‌ ಸೂಕ್ತ ಬಸ್ ವ್ಯವಸ್ಥೆ ಇಲ್ಲ.

ಕಲ್ಲುಕೋಟೆಯಿಂದ ಸುಮಾರು 2 ಕಿ.ಮೀ. ನಡೆದುಕೊಂಡು‌ ಮುಕ್ಕಡಿಘಟ್ಟಕ್ಕೆ ಬರಬೇಕು. ಅಲ್ಲಿ ಗೂಡ್ಸ್ ಆಟೊ, ಇನ್ನಿತರ ವಾಹನ ಹಿಡಿದು ಶಾಲಾ ಕಾಲೇಜಿಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಕಳೆದ ಆಗಸ್ಟ್, ಡಿಸೆಂಬರ್ ತಿಂಗಳು ಸೇರಿ ಈವರೆಗೆ ಮೂರು ಬಾರಿ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ‌ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕಲ್ಲುಕೋಟೆಯ‌ ಎಂಎಸ್ ಡಬ್ಲ್ಯು ವಿದ್ಯಾರ್ಥಿ‌ ಅರುಣ್ ಕುಮಾರ್‌ ದೂರಿದರು.

ಬೆಳಿಗ್ಗೆ ಹೇಗೋ ಶಾಲೆಗೆ ಬರುತ್ತೇವೆ. ಆದರೆ ಸಂಜೆ ಊರಿಗೆ ಹೋಗಬೇಕಾದರೆ ಕತ್ತಲಾಗುತ್ತದೆ. ವಿದ್ಯಾರ್ಥಿನಿಯರು ಭಯಭೀತಿಯಲ್ಲಿ ಓಡಾಡಬೇಕಾದ ಪರಿಸ್ಥಿತಿ‌ ಇದೆ. ಕೆಲ ಪುಂಡರು‌ ಚುಡಾಯಿಸಿದ‌ ಘಟನೆಯೂ ಈ ಹಿಂದೆ ನಡೆದಿದೆ. ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಮನೆ ತಲುಪುವಂತಾಗಲು ಹಾಗೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗುವಂತಾಗಲು ಕೂಡಲೇ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ‌ ಮಾಡಬೇಕು ಎಂದು‌ ಮನವಿ‌ ಮಾಡಿದರು.

ಪ್ಯಾರಾ‌ಮೆಡಿಕಲ್ ವಿದ್ಯಾರ್ಥಿನಿ ಪ್ರಿಯಾ‌ ಮಾತನಾಡಿ, ಕಾಲೇಜಿಗೆ ಬಂದು ಹೋಗುವುದೇ ದುಸ್ತರ‌ ಎನಿಸಿದೆ. ಒಬ್ಬೊಬ್ಬರೇ ಭಯದಲ್ಲಿ ಓಡಾಡಬೇಕಾದ ಅನಿವಾರ್ಯವಿದೆ. ಬಸ್ ಬಿಡುವಂತೆ ಹಲವು ಬಾರಿ‌ ಮನವಿ‌ ಮಾಡಿದರೂ ಅಧಿಕಾರಿಗಳು‌ ಸ್ಪಂದಿಸಿಲ್ಲ‌‌ ಎಂದು‌ ದೂರಿದರು.

Leave a Reply

Your email address will not be published. Required fields are marked *