ಪ್ರಜಾಪ್ರಭುತ್ವ-ಸಮಾಜವಾದ-ಜಾತ್ಯತೀತತೆ ನೆಹರೂ ಬದುಕಿನ ಮೌಲ್ಯಗಳು- ಈ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು- ಸಿಎಂ ಸಿದ್ದರಾಮಯ್ಯ

ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ಜವಾಹರಲಾಲ್ ನೆಹರೂ ಅವರು. ಅವರ ದೂರದೃಷ್ಟಿಯ ಫಲವನ್ನು ಆಗಿನ-ಈಗಿನ ಪೀಳಿಗೆಯವರೂ ಅನುಭವಿಸುತ್ತಿದ್ದಾರೆ. ಮುಂದಿನ ಪೀಳಿಗೆಯವರೂ ಅನುಭವಿಸುತ್ತಾರೆ. ಪ್ರಜಾಪ್ರಭುತ್ವ-ಸಮಾಜವಾದ-ಜಾತ್ಯತೀತತೆ ನೆಹರೂ ಬದುಕಿನ ಮೌಲ್ಯಗಳು. ಈ ಮೌಲ್ಯಗಳನ್ನು ಪ್ರಧಾನಮಂತ್ರಿಯಾಗಿ ಭಾರತದಲ್ಲಿ ನೆಲೆಯೂರಿಸಲು ಶ್ರಮಿಸಿದರು. ಈ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನೆಹರೂ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 134ನೇ ಜಯಂತಿ ಅಂಗವಾಗಿ ವಿಧಾನಸೌಧದಲ್ಲಿರುವ ನೆಹರೂರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಮಾತನಾಡಿದ ಅವರು, ಮಕ್ಕಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಕಾರಣಕ್ಕೇ ದೇಶದ ಮಕ್ಕಳ ಪಾಲಿಗೆ ಚಾಚಾ ನೆಹರೂ ಆದರು. ಸ್ವಾತಂತ್ರ್ಯ ಹೋರಾಟದಲ್ಲಿ 9 ವರ್ಷಗಳ ಕಾಲ ಜೈಲುವಾಸ ಅನುಭಸಿದ್ದರು. ಸ್ವಾತಂತ್ರ್ಯ ನಂತರದಲ್ಲಿ ದೇಶದ ಪ್ರಧಾನಿಯಾಗಿ ಆಧುನಿಕ ಭಾರತದ ಶಿಲ್ಪಿ ಎನ್ನಿಸಿಕೊಂಡರು ಎಂದರು.

ನೆಹರೂ ಅವರು ಪ್ರಧಾನಿ ಆಗಿ ವಿರೋಧ ಪಕ್ಷದವರು ಮಾತಾಡುವಾಗ ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದವರ ಮಾತಿಗೆ ಗೌರವ ಕೊಡುತ್ತಿದ್ದ ಘನತೆಯ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಕೊಂಡಾಡಿದರು.

ಯೋಜನಾ ಆಯೋಗ ರಚಿಸಿದರು, ಪಂಚವಾರ್ಷಿಕ ಯೋಜನೆ ಜಾರಿಗೆ ತಂದರು, ಕೊನೆ ಕ್ಷಣದವರೆಗೂ ಪ್ರಜಾಪ್ರಭುತ್ವ, ಜಾತ್ಯತೀತ ತತ್ವ, ಸಮಾಜವಾದದ ಮೌಲ್ಯಗಳನ್ನು ಜನಮಾನಸಕ್ಕೆ ವಿಸ್ತರಿಸಲು ಶ್ರಮಿಸಿದರು ಎಂದು ಶ್ಲಾಘನೆ ಮಾಡಿದರು.

Leave a Reply

Your email address will not be published. Required fields are marked *