‘ನಗರಸಭಾ ಸದಸ್ಯರು, ಅಧಿಕಾರಿಗಳು ಅದೆಷ್ಟು ಅಯೋಗ್ಯರು’ ಎಂದ ನಗರದ ನಿವಾಸಿ ಗಿರೀಶ್: ‘ಆಯೋಗ್ಯ’ ಶಬ್ಧಕ್ಕೆ ಕೆರಳಿದ ನಗರಸಭೆ ಸದಸ್ಯರು: ಗಿರೀಶ್ ಮೇಲೆ ಮುಗಿಬಿದ್ದು ತೀವ್ರ ತರಾಟೆ

‘ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಅದೆಷ್ಟು ಅಯೋಗ್ಯರು’ ಎಂದು ನಗರದ ನಿವಾಸಿ ಗಿರೀಶ್ ಮಾತಿಗೆ ಕೆರಳಿದ ಸದಸ್ಯರು ಹಾಗೂ ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಗಿರೀಶ್ ಮೇಲೆ ಮುಗಿಬಿದ್ದು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ಗುರುವಾರ ನಗರಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಕುಂದು-ಕೊರತೆ ಸಭೆಯಲ್ಲಿ ನಡೆಯಿತು.

ನಾಗರಕೆರೆಯಲ್ಲಿನ ನೀರು ಕಲುಷಿತಗೊಳ್ಳುತ್ತಿರುವ ಹಾಗೂ ಒಳಚರಂಡಿ ನೀರು ಸೂಕ್ತ ರೀತಿಯಲ್ಲಿ ಶುದ್ದೀಕರಿಸದೆ ಬಿಡುತ್ತಿರುವ ಬಗ್ಗೆ ಚನ್ನೈ ಹಸಿರು ನ್ಯಾಯಮಂಡಳಿಗೆ ಗಿರೀಶ್ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದಾರೆ. ನಗರದ ಸ್ವಚ್ಛತೆ ಹಾಗೂ ಒಳಚರಂಡಿ ತ್ಯಾಜ್ಯ ನೀರಿನ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿರುವ ಮಾಹಿತಿಗೆ ಅಧಿಕಾರಿಗಳು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ ಎನ್ನುವ ವಿಷಯ ಮಾತನಾಡುವ ವೇಳೆ ಗಿರೀಶ್ ‘ಅಯೋಗ್ಯರು’ ಶಬ್ದ ಬಳಕೆ ಮಾಡಿದರು.

ಇದರಿಂದ ಕುಪಿಗೊಂಡ ಸದಸ್ಯ ಟಿ.ಎನ್.ಪ್ರಭುದೇವ್, ನಗರದಲ್ಲಿನ ಸುಮಾರು ಒಂದು ಲಕ್ಷ ಜನರ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದಿರುವ ಸದಸ್ಯರನ್ನು ಅಯೋಗ್ಯರೆಂದು ನಿಂಧಿಸಿದರೆ ಅದು ಇಡೀ ನಗರದ ಜನರನ್ನು ನಿಂಧಿಸಿದಂತೆ. ನಾವುಗಳು ಸಹ ಹೋರಾಟದ ಹಿನ್ನೆಲೆಯಿಂದಲೇ ಇಂದು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಬಂದಿದ್ದೇವೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡುವ ಸಲುವಾಗಿಯೇ ಸಭೆ ನಡೆಸಲಾಗುತ್ತಿದೆ. ಆದರೆ ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವಾಗ ಜವಾಬ್ದಾರಿ ಅರಿತು ಮಾತನಾಡಬೇಕು. ಈ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

‘ಅಯೋಗ್ಯರು’ ಶಬ್ಧ  ಸಭೆಯಲ್ಲಿ  ಕೋಲಾಹಲವನ್ನೇ ಉಂಟುಮಾಡಿತ್ತು. ಆದರೆ ಗಿರೀಶ್ ಮಾತ್ರ ತಾವು ಬಳಸಿದ್ದ ಅಯೋಗ್ಯರು ಶಬ್ದ ಬಳಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸಭೆಯಿಂದ ಹೊರನಡೆದರು.

Leave a Reply

Your email address will not be published. Required fields are marked *