9 ತಿಂಗಳಲ್ಲಿ ಬಮೂಲ್ ಒಕ್ಕೂಟಕ್ಕೆ 60 ಕೋಟಿ ಲಾಭ: ಸಂಪೂರ್ಣ ರೈತರ ಖಾತೆಗೆ ಲಾಭಾಂಶ ಹಣ

ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ ಪರದಾಟ.. ಹೀಗೆ ಸಾಲು ಸಾಲು ಸಮಸ್ಯೆಗಳಿಂದಲೇ ಬಸವಳಿದಿದ್ದ ರೈತರಿಗೆ ಬಮುಲ್ ಒಕ್ಕೂಟ ಬಂಪರ್ ಖುಷಿ ಸುದ್ದಿ ನೀಡಿದೆ.

ಮಾಜಿ ಸಂಸದ ಡಿ.ಕೆ. ಸುರೇಶ್ ಬಮುಲ್ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ 9 ತಿಂಗಳಲ್ಲಿ ಬರೊಬ್ಬರಿ 60 ಕೋಟಿ ರೂ. ಲಾಭಾಂಶವನ್ನು ಬೆಂಗಳೂರು ಹಾಲು ಒಕ್ಕೂಟ ಗಳಿಸಿದೆ. ಅಲ್ಲದೆ ಹಿಂದಿನ ಆಡಳಿತ ಮಂಡಳಿಗಳಲ್ಲಿ ದಾಖಲಾಗಿದ್ದ 14 ಕೋಟಿ ರೂ. ಸಾಲವನ್ನ ಮನ್ನ ಮಾಡಿ, ಬಮುಲ್ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ಪ್ರತಿರೈತನಿಗೂ ಪ್ರತಿ ಲೀಟರ್ ಹಾಲಿಗೆ 1 ರೂ.ನೀಡಲು ಆಡಳಿತ ಮಂಡಳಿ ತೀರ್ಮಾನ ಮಾಡಿ ರೈತರಿಗೆ ಯುಗಾದಿ ಹಬ್ಬದ ಬೋನಸ್ ಘೋಷಿಸಿದೆ. ಈ ಮೂಲಕ ರೈತರ ಮೊಗದಲ್ಲಿ ನಗುವನ್ನು ಮೂಡಿಸಿದೆ.

ಪ್ರತಿ ಲೀ. ಹಾಲಿಗೆ ಒಂದು ರೂ. ಪ್ರೋತ್ಸಾಹ ಧನ ಹೆಚ್ಚಳ:

60 ಕೋಟಿ ರೂ. ಲಾಭ ಗಳಿಸಿರುವ ಬೆಂಗಳೂರು ಹಾಲು ಒಕ್ಕೂಟವು ಲಾಭದ ಸಂಪೂರ್ಣ ಹಣವನ್ನು ರೈತರಿಗೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷ ಡಿ.ಕೆ ಸುರೇಶ್ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕಳೆದ 2025 ಏಪ್ರಿಲ್ 1 ರಿಂದ 2026ರ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಒಕ್ಕೂಟದ ವ್ಯಾಪ್ತಿಯ ರೈತರು ಡೇರಿಗಳಿಗೆ ಹಾಕಿರುವ ಪ್ರತಿ ಲೀಟರ್ ಹಾಲಿಗೆ ತಲಾ ಒಂದು ರೂಪಾಯಿಯಂತೆ ಪ್ರೋತ್ಸಾಹ ಧನ ವಿತರಿಸಲು ತೀರ್ಮಾನ ಮಾಡಿದೆ.

 14 ಕೋಟಿ ಸಾಲ ಚುಪ್ತಾ:

ಡಿ.ಕೆ ಸುರೇಶ್ ಬಮುಲ್ ಒಕ್ಕೂಟದ ಅಧ್ಯಕ್ಷರಾದ 9 ತಿಂಗಳ ಅವಧಿಯಲ್ಲಿ ಬೆಂಗಳೂರ ಹಾಲು ಒಕ್ಕೂಟದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪಾರದರ್ಶಕತೆ ಆಡಳಿತದ ಫಲವಾಗಿ 60 ಕೋಟಿ ಲಾಭಂಶವನ್ನು ಬಮುಲ್ ಸಾಧಿಸಿದೆ. ಅಲ್ಲದೆ ಈ ಹಿಂದಿನಿಂದ ಬಮುಲ್ ಒಕ್ಕೂಟದ ಹೆಸರಿನಲ್ಲಿದ್ದ 14 ಕೋಟಿ ರೂ. ಸಾಲವನ್ನ ಕಟ್ಟಿ ಚುಪ್ತಾ ಮಾಡಲಾಗಿದೆ. ಮುಂದೆ ಹಾಲಿ ಬಮುಲ್ ಒಕ್ಕೂಟದಲ್ಲಿರುವ ವಿವಿಧ ಪದಾರ್ಥಗಳಿಂದ 131 ಕೋಟಿ ಮೌಲ್ಯದ ದಾಸ್ತಾನಿಂದ 60 ಕೋಟಿ ಲಾಭದ ನಿರೀಕ್ಷೆ ಹೊಂದಿದ್ದು, ಇದೀಗ ರೈತರ ಪ್ರಾತಿನಿಧಿಕ ಸಂಸ್ಥೆಯಾದ ಬಮುಲ್ ಲಾಭದತ್ತ ಮುಖಮಾಡಿರುವುದು ರೈತರಿಗೆ ಖುಷಿ ನೀಡಿದೆ.

ಪ್ರತಿ ಡೇರಿಗೆ 15 ಸಾವಿರ ಹಣ:

ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡೇರಿಗಳ ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಮತ್ತು ಅಲ್ಲಿನ ಸಿಬ್ಬಂದಿಗೂ ಆದ್ಯತೆ ನೀಡಿರುವ ಬಮುಲ್ ತಲಾ ಒಂದು ಡೇರಿಗೆ 15 ಸಾವಿರ ಸಹಾಯ ಧನ ಘೋಷಣೆ ಮಾಡಿದೆ. ಅಲ್ಲದೆ ಟಿಎಡಿಎ ಸೇರಿದಂತೆ ಬಾಕಿ ಇದ್ದಂತಹ ಎಲ್ಲಾ ಬಾಕಿ/ಖರ್ಚುಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ. ಈ ಮೂಲಕ ಸಿಬ್ಬಂದಿ ನೆರವಿಗೂ ಧಾವಿಸಿದೆ.

ಪಶು ಆಹಾರದತ್ತ ಚಿತ್ತ:

ರೈತರ ಪ್ರಮುಖ ಬೇಡಿಕೆಯಾಗಿರುವ ಪಶು ಆಹಾರದ ಬೆಲೆ ಕಡಿವಾಣಕ್ಕೆ ಬೇಕಾದ ಕ್ರಮಗಳನ್ನು ಜರುಗಿಸಲು ಒಕ್ಕೂಟ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಪಶು ಆಹಾರ ಬೆಲೆಗಳು ರೈತರಿಗೆ ಕೈಗೆಡುಕುವ ರೀತಿಯಲ್ಲಿ ಜಾರಿ ಮಾಡಲು ಶ್ರಮಿಸಲಾಗುವುದು ಎಂದು ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ತಿಳಿಸಿದ್ದಾರೆ.

ಹಸುಗಳಿಗಾಗಿ ಸಾಲದ ಮೇಳ:

ಗ್ರಾಮೀಣ ಭಾಗದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸುವ ಸಲುವಾಗಿ ರೈತರಿಗೆ ನೆರವಾಗಿ ಸಾಲ ನೀಡಲು ಮುಂದಾಗಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಮೂಲಕ ಹೊಸ ಹಸು ಖರೀದಿಗೆ ವಿಶೇಷ ಸಾಲ ಯೋಜನೆ ನೀಡಲಾಗುವುದು. ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ 25 ಜನ ರೈತರಿಗೆ ವಾರ್ಷಿಕ ಶೇ. 3ರ ಬಡ್ಡಿ ದರದಲ್ಲಿ ರೂ. 1.60 ಲಕ್ಷದಿಂದ ರ. 15 ಲಕ್ಷ ವರೆಗೆ ಸಾಲ ನೀಡಲಾಗುವುದು. ಇದಕ್ಕಾಗಿ ಸಾಲದ ಮೇಳವನ್ನು ಆಯೋಜಿಸಲಾಗುವುದು . ಹೆಣ್ಣು ಕರು ಜನನವನ್ನು ಪ್ರೋತ್ಸಾಹಿಸಲು ತಳಿ ಸುಧಾರಣಾ ಕಾರ್ಯಕ್ರಮ ಇದೆ. ರೈತರಿಗೆ ಹಸಿ ಮೇವು, 1ಲಕ್ಷ ಮೇವು ಚೀಲಗಳು (ಕೌಮ್ಯಾಟ್) ಮತ್ತು ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಶೀಘ್ರವಾಗಿ ಒದಗಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!