ಭೂಗಳ್ಳರಿಂದ 8 ಎಕರೆ ಜಮೀನು ರಕ್ಷಣೆ: ಆಶ್ರಯ ಯೋಜನೆಗೆ ಭೂಮಿ ಮಂಜೂರು: ಆಶ್ರಯ ಯೋಜನೆಯ ಯಶಸ್ವಿ ಕಾರ್ಯಕ್ರಮ ಆಯೋಜನೆ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಮೇಲಿನಜೂಗಾನಹಳ್ಳಿ(ಎಸ್.ಎಸ್.ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ ಒಟ್ಟು 120 ಎಕರೆ ಗೋಮಾಳ ಜಮೀನು ಇದೆ. ಅದರಲ್ಲಿ ಕೆಲವರಿಗೆ ಸರ್ಕಾರದಿಂದ ಗ್ರಾಂಟ್ ಆಗಿದೆ. ಮಿಕ್ಕುಳಿದ ಭೂಮಿಯನ್ನು ಭೂಕಳ್ಳರು ಕಬಳಿಸಿದ್ದಾರೆ. ಆದರೆ, ಎಲ್ಲೂ ಒಂದು ಅಡಿ ಜಾಗ ನಿರಾಶ್ರಿತರಿಗಾಗಿ ಮೀಸಲಿರಲಿಲ್ಲ. ಒಂದು ಊರಲ್ಲಿ ಬಿಟ್ಟರೆ ಬೇರೆ ಯಾವ ಊರಲ್ಲೂ ಸಹ ಸ್ಮಶಾನಕ್ಕೂ ಕೂಡ ಜಾಗ ಮೀಸಲಿಡಲಿಲ್ಲ. ಈ ಹಿನ್ನೆಲೆ 2022-23ನೇ ಸಾಲಿನಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಭೂಗಳ್ಳರು ಕಬಳಿಸಿದ್ದ ಭೂಮಿಯನ್ನು ಪತ್ತೆ ಮಾಡಿ ಆಶ್ರಯ ಯೋಜನೆಗಾಗಿ ಸುಮಾರು 8 ಎಕರೆ ಜಮೀನನ್ನು ಕಾನೂನು ಬದ್ಧವಾಗಿ ಮಂಜೂರು ಮಾಡಿಸಿಕೊಂಡಿದ್ದೇವೆ ಎಂದು ವಕೀಲ ಪ್ರತಾಪ್ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಮೇಲಿನಜೂಗಾನಹಳ್ಳಿ(ಎಸ್.ಎಸ್.ಘಾಟಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ ಸುಮಾರು 8 ಎಕರೆ ಜಮೀನು ಆಶ್ರಯ ಯೋಜನೆಗೆ ಮಂಜೂರು ಆಗಿರುವ ಹಿನ್ನೆಲೆ ಆಶ್ರಯ ಯೋಜನೆಯ ಯಶಸ್ವಿ ಕಾರ್ಯಕ್ರಮವನ್ನು ಮಾಕಳಿ ದುರ್ಗ ರೈಲ್ವೆ‌ ನಿಲ್ದಾಣ ಸಮೀಪ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ 8 ಎಕರೆಗೆ ಪಹಣಿ, ಮ್ಯುಟೇಶನ್ ಸೇರಿದಂತೆ ಎಲ್ಲಾ ದಾಖಲೆಗಳು ಬಂದಿವೆ.

ಘಾಟಿ ಸುತ್ತಾಮುತ್ತಾ ಸರ್ಕಾರಿ ಜಮೀನುಗಳನ್ನು ಭೂಗಳ್ಳರು, ಬಲಾಡ್ಯರು ಕಬಳಿಕೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸರ್ಕಾರ ಈ ಕೂಡಲೇ ಪರಿಶೀಲನೆ ಮಾಡಿ, ಸರ್ಕಾರಿ ಜಮೀನುಗಳನ್ನು ಉಳಿಸಿ, ರೈತರು, ನಿರಾಶ್ರಿತರು, ಬಡವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಸದ್ಯ ಗುಂಜೂರು ಗ್ರಾಮದ ಸರ್ವೇ ನಂಬರ್ 33ರಲ್ಲಿ 8 ಎಕರೆ ನಿವೇಶನಕ್ಕಾಗಿ ಮಂಜೂರಾಗಿರುವ ಜಾಗಕ್ಕೆ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪಂಚಾಯಿತಿ ವತಿಯಿಂದ ಈ ಎಲ್ಲಾ ಅರ್ಜಿಗಳು ಪರಿಶೀಲನೆ ಆಗುತ್ತವೆ. ನಿಜವಾದ ಫಲಾನುಭವಿಗಳಿಗೆ‌ ನಿವೇಶನ ದೊರಕುವ ನಂಬಿಕೆ‌ ಇದೆ ಎಂದರು.

ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ (ಕಿಟ್ಟಿ) ಮಾತನಾಡಿ, ಮೇಲಿನ ಜುಗಾನಹಳ್ಳಿ (ಎಸ್. ಎಸ್. ಘಾಟಿ) ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತ ಹಳ್ಳಿಗಳಿಗೆ ಇದೊಂದು ಸುಸಂದರ್ಭ. ಏಕೆಂದರೆ ಕೆಲವು ಹಳ್ಳಿಗಳಿಗೆ ಆಶ್ರಯ ಯೋಜನೆಗೆ ಜಮೀನು ಸಿಕ್ಕಿರುವುದು ಒಳ್ಳೆಯ ಸಂಗತಿಯಾಗಿದೆ. ಏಕೆಂದರೆ ಬೆಂಗಳೂರಿನ ಭೂಕಳ್ಳರು ಬಂದು ಇಲ್ಲಿ ಜಮೀನನ್ನು ಕಳ್ಳತನ ಮಾಡುತ್ತಿದ್ದಾರೆ. ನಾವು ಎಚ್ಚೆತ್ತುಕೊಂಡರೆ ಮಾತ್ರ ನಮಗೆ ಜಮೀನು ಸಿಗುತ್ತದೆ. ಇಲ್ಲದಿದ್ದರೆ ಜಮೀನುಗಳು ಸಿಗುವುದಿಲ್ಲ ಎಂದು ಹೇಳಿದರು.

ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಸುರೇಶ್ ಕುಮಾರ್, ಮುನಿಕೃಷ್ಣಪ್ಪ, ತೂಬಗೆರೆ ಹೋಬಳಿ ಬಿಜೆಪಿ ಅಧ್ಯಕ್ಷ ವಾಸುದೇವ್, ಜೆಡಿಎಸ್ ಮುಖಂಡ ಉದಯ ಆರಾಧ್ಯ, ಘಾಟಿ ಸುಬ್ರಹ್ಮಣ್ಯ ದೇವಾಲಯ ಅರ್ಚಕ ನಾಗರಾಜ್ ಸೇರಿದಂತೆ ಊರಿನ ಎಲ್ಲಾ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!