65 ಪ್ರಕರಣಗಳಲ್ಲಿ114 ಆರೋಪಿಗಳ ಬಂಧನ: 83,43,657 ಮೌಲ್ಯದ ಸ್ವತ್ತು ವಾರಸುದಾರರಿಗೆ ವಾಪಸ್

ತಮ್ಮದೇ ಏರಿಯಾದ ಮನೆಯೊಂದಕ್ಕೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ಖತರ್ನಾಕ್ ಖದೀಮರು ಕಳ್ಳತನ ಮಾಡಿದ್ದಾರೆ.

ಮನೆಗಳ್ಳತನ ಆಗಿದ್ದಕ್ಕೆ ಮಾಲೀಕರು ಪೊಲೀಸರಿಗೆ ದೂರನ್ನ ಸಹ ನೀಡಿದ್ದರು, ಈ ವೇಳೆ ಅದೇ ಏರಿಯಾದ ಇಬ್ಬರು ಯುವಕರು ಪ್ರಕರಣ ಯಾಕೆ ಬೇಧಿಸಿಲ್ಲ ಅಂತಾ ಪದೇ ಪದೇ ಪೊಲೀಸರ ಮೇಲೆ ಒತ್ತಡ ಹಾಕೋಕೆ ಶುರು ಮಾಡಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು ಇಬ್ಬರನ್ನ ವಿಚಾರಣೆಗೆ ಒಳಪಡಿಸಿದ್ದಾರೆ, ಆವಾಗ ಪ್ರಕರಣದ ಅಸಲಿಯತ್ ಬೆಳಕಿಗೆ ಬಂದಿದೆ.

2024 ರ ಡಿಸೆಂಬರ್ 12 ರಂದು ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ತಾಜ್ ನಗರದಲ್ಲಿ ಮಹ್ಮದ್ ಅಬ್ದುಲ್ ನಬೀ ಎಂಬುವರು ಕುಟುಂಬ ಸಮೇತ ಹಜ್ ಯಾತ್ರೆಗೆ ತೆರಳಿದ್ದರು. ಈ ವೇಳೆ ಸಂಬಂಧಿ ವಾಸಿಮ್ ಎಂಬಾತನಿಗೆ ಮನೆ ಬೀಗ ಕೊಟ್ಟು ಮನೆ ನೋಡಿಕೊಳ್ಳಲು ಹೇಳಿದ್ದರು. ಈ ವೇಳೆ ವಾಸಿಮ್ ತನ್ನ ಸ್ನೇಹಿತನಾದ ಶಾದಾಬ್ ಎಂಬಾತನ ಜೊತೆಗೂಡಿ ಮಹ್ಮದ್ ಅಬ್ದುಲ್ ನಬೀ ಮನೆ ಸ್ವಚ್ಛ ಮಾಡುವ ನೆಪದಲ್ಲಿ ಮನೆಯಲ್ಲಿನ ನಗದು ಹಣ ಮತ್ತು ಚಿನ್ನಾಭರಣಗಳನ್ನ ದೋಚಿದ್ದರು.
ಮಾರನೇ ದಿನೇ ಹಜ್ ಯಾತ್ರೆ ಮುಗಿಸಿಕೊಂಡು ಮನೆಗೆ ಬಂದಾಗ ಕಳ್ಳತನವಾಗಿರೋದನ್ನ ಕಂಡು ಅಬ್ದುಲ್ ನಬೀ ಚೌಕ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ವಾಸಿಮ್ ಮತ್ತು ಶಾದಾಬ್ ಇಬ್ಬರು ಸೇರಿಕೊಂಡು ಮನೆಗಳ್ಳತನ ಪ್ರಕರಣ ಭೇದಿಸಲು ಯಾಕೆ ವಿಳಂಬ ಮಾಡ್ತಿದ್ದಿರಿ, ಬೇಗ ಆರೋಪಿಗಳನ್ನ ಬಂಧಿಸಿ ರಿಕವರಿ ಮಾಡಿ ಅಂತಾ ಪದೇ ಪದೇ ಒತ್ತಡ ಹಾಕಿದ್ದಾರೆ. ಈ ವೇಳೆ ಅನುಮಾನಗೊಂಡ ಚೌಕ್ ಇನ್ಸ್ಪೆಕ್ಟರ್ ರಾಘವೇಂದ್ರ, ವಾಸಿಮ್ ಮತ್ತು ಶಾದಾಬ್‌ರನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವೇ ಅಬ್ದುಲ್ ನಬೀ ಮನೆಗಳ್ಳತನ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ.

ಮನೆಗಳ್ಳತನ ಸೇರಿದಂತೆ ಇತರೆ 65 ಪ್ರಕರಣಗಳಲ್ಲಿ 114 ಆರೋಪಿಗಳನ್ನು ಬಂಧಿಸಿ ಸದರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಒಟ್ಟು 936 ಗ್ರಾಂ ಬಂಗಾರ, 1908 ಗ್ರಾಂ ಬೆಳ್ಳಿ, ನಗದು ಹಣ ರೂ ₹ 3,39,650/-  ಹಾಗೂ ಇತರೆ ಬೆಲೆ ಬಾಳುವ ವಸ್ತುಗಳು ₹ 25,54,500 ಸೇರಿದಂತೆ ಒಟ್ಟು ₹ 83,43,657/- ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಈ ಸಂದರ್ಭದಲ್ಲಿ ಪ್ರಕರಣಗಳನ್ನು ಭೇದಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ ಅವರು ಪ್ರಸಂಶನಾ ಪತ್ರ ನೀಡಿ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!