625ಕ್ಕೆ 625 ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದೊಡ್ಡಬಳ್ಳಾಪುರ ಶಾಲೆಯ ರಂಜಿತಾ ಎ.ಸಿ: ತಂದೆ ರೈತ: ಜಿಲ್ಲಾಧಿಕಾರಿ ಆಗುವ ಕನಸು

ಎಸ್ಎಸ್ಎಲ್​ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ ನಲ್ಲಿರುವ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾ ಎ.ಸಿ ಎಂಬ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರಂಜಿತಾ ಎ.ಸಿ ಮನೆಯಲ್ಲೇ ಸಂಭ್ರಮ ಮನೆಮಾಡಿತ್ತು. ಶಿಕ್ಷಕರು, ಪೋಷಕರು, ಸ್ನೇಹಿತರು, ಸಂಬಂಧಿಕರು ಸೇರಿದಂತೆ‌ ಇತರರು ಸಿಹಿ ಸವಿದು ಸಂಭ್ರಮಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿ, ಕೊಯಿರ ಗ್ರಾಮ ಪಂಚಾಯಿತಿಯ ಅರುವನಹಳ್ಳಿ ಗ್ರಾಮದ ನಿವಾಸಿ ರಂಜಿತಾ ಎ.ಸಿ ಅವರ ತಂದೆ ಚಂದ್ರಶೇಖರ್ ರೈತರಾಗಿದ್ದು, ತಾಯಿ ಅನಿತಾ ಗೃಹಿಣಿಯಾಗಿದ್ದಾರೆ.

“ಪಬ್ಲಿಕ್ ಮಿರ್ಚಿ” ಜೊತೆ ಮಾತನಾಡಿದ ರಂಜಿತಾ ಎ.ಸಿ, “ಶಾಲೆಯ ಅವಧಿ‌ ಬಿಟ್ಟು ಪ್ರತಿನಿತ್ಯ 8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ದಿನಕ್ಕೆ 5-6 ತಾಸು ಓದುತ್ತಿದ್ದೆ. ಶಿಕ್ಷಕರ ಪ್ರೋತ್ಸಾಹ ಸಾಕಷ್ಟಿತ್ತು. ಅಪ್ಪ-ಅಮ್ಮ ನನಗೆ ಓದಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಕಂಠಪಾಠಕ್ಕಿಂತ ಅರ್ಥ ಮಾಡಿಕೊಂಡು ಓದಿದರೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳುತ್ತೇನೆ.‌ ಭವಿಷ್ಯದಲ್ಲಿ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಂಡು ಜಿಲ್ಲಾಧಿಕಾರಿ ಆಗುವ ಗುರಿ ಇಟ್ಟುಕೊಂಡಿದ್ದೇನೆ ಎಂದರು.

ರಂಜಿತಾ ಎ.ಸಿ ತಂದೆ ಚಂದ್ರಶೇಖರ್ ಮಾತನಾಡಿ, ನನ್ನ ಮಗಳ ಈ‌ ಸಾಧನೆಯಿಂದ ನನಗೆ ಬಹಳ ಸಂತಸ ತಂದಿದೆ. ಮುಂದೆ ಉನ್ನತ ವ್ಯಾಸಂಗ ಮಾಡಿಸಿ ಜಿಲ್ಲಾಧಿಕಾರಿಯನ್ನಾಗಿ ಮಾಡುತ್ತೇನೆ. ನನ್ನ ಮಗಳ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

Leave a Reply

Your email address will not be published. Required fields are marked *