5 ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ-ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಸುಮಾರು 1.92 ಕೋಟಿ ಕುಟುಂಬಗಳು ವಿದ್ಯುತ್ ಸಂಪರ್ಕ ಹೊಂದಿದ್ದು, ಸುಮಾರು 1.73 ಕೋಟಿ ಕುಟುಂಬಗಳು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಬಳಸುತ್ತಿವೆ. ಇದುವರೆಗೂ ಸುಮಾರು 1.50 ಕೋಟಿ ವಿದ್ಯುತ್ ಬಳಕೆದಾರರು ‘ಗೃಹ ಜ್ಯೋತಿ’ ಯೋಜನೆಗೆ ತಮ್ಮಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರಗಿಯಲ್ಲಿ ಗೃಹ ಜ್ಯೋತಿ ಗ್ಯಾರೆಂಟಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನೋಂದಾಸಿಕೊಂಡ ಕುಟುಂಬಗಳಿಗೆ ಶೂನ್ಯ ಬಿಲ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಈ ಮೂಲಕ ಕರ್ನಾಟಕದ ಅಂದಾಜು 1.73 ಕೋಟಿ ಫಲಾನುಭವಿಗಳ ಮನೆಗಳಲ್ಲಿ ನಮ್ಮ ಗೃಹಜ್ಯೋತಿ ಬೆಳಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

5 ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ. ವಿರೋಧ ಪಕ್ಷದವರು ಈ ಬಗ್ಗೆ ಗುಲ್ಲೆಬ್ಬಿಸುತ್ತಿದ್ದಾರೆ. ವಿರೋಧ ಪಕ್ಷದವರಲ್ಲದೇ ಈ ದೇಶದ ಪ್ರಧಾನಿಗಳು ಕೂಡ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿಲ್ಲ. ಈ ದೇಶವನ್ನು ದಿವಾಳಿ ಮಾಡಿರುವುದು ನರೇಂದ್ರ ಮೋದಿಯವರು ಎಂದರು.

ಕರ್ನಾಟಕ ಹಿಂದೆ ಎಲ್ಲ ಭರವಸೆಗಳನ್ನು ಈಡೇರಿಸಿದಾಗ ಆರ್ಥಿಕವಾಗಿ ಸುಭದ್ರವಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ, ಬೆಲೆ ಏರಿಕೆ ಮಾಡಿ, ನಿರುದ್ಯೋಗದ ಸಮಸ್ಯೆಯನ್ನು ಹೆಚ್ಚು ಮಾಡಿ, ರಾಜ್ಯದ ಬಡವರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ ಬಿಜೆಪಿ ವಿರುದ್ಧ ಕಿಡಿಕಾರಿದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ, ಕರ್ನಾಟಕದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಹಿಂದುಳಿಯುವಂತೆ ಮಾಡಿದೆ. ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿರುವುದರಿಂದ ಹೊಟ್ಟೆಯುರಿಯಿಂದ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಬದಲಾಯಿಸಿದ್ದೇ ಬಿಜೆಪಿ ಕೊಡುಗೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದವರು ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆಯೂ ಗುಲ್ಲೆಬ್ಬಿಸಿದರು. ಕೇಂದ್ರದಲ್ಲಿರುವುದು ಬಡವರ ವಿರೋಧಿ ಸರ್ಕಾರ. ಅಕ್ಕಿ ಕೊಡುವುದಾಗಿ ಮೊದಲು ಒಪ್ಪಿಗೆ ನೀಡಿ, ನಂತರ ಅಕ್ಕಿ ಕೊಡದೆ ರಾಜಕೀಯ ಮಾಡಿದರು. ರೂ.34 ರಂತೆ ಹಣ ಕೊಡುತ್ತೇವೆ ಎಂದರೂ ಅವರು ಬಡವರಿಗೆ 5 ಕೆಜಿ ಅಕ್ಕಿಯನ್ನು ನೀಡಲಿಲ್ಲ. ಬಡತನ ಹಿಂಸೆಯ ಅತಿ ಕೆಟ್ಟ ರೂಪ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ದೇಶದಲ್ಲಿ ಅಸಮಾನತೆ ಇದೆ, ಬಡತನ ಹಾಗೂ ಶ್ರೀಮಂತಿಕೆ ಇದೆ. ಇದನ್ನು ಹೋಗಲಾಡಿಸುವ ಕೆಲಸ ನಾವು ಮಾಡಬೇಕು ಎಂದರು.

ಬೆಲೆ ಏರಿಕೆಯ ಮೂಲಕ ನರೇಂದ್ರ ಮೋದಿಯವರು ಜನರ ಬಳಿ ಇದ್ದ ದುಡ್ಡು ಕಿತ್ತುಕೊಳ್ಳತ್ತಾರೆ. ಜನತೆ ವಿರೋಧ ಪಕ್ಷದವರ ಮಾತುಗಳಿಗೆ ಕಿವಿ ಕೊಡಬೇಕಾದ ಅಗತ್ಯವಿಲ್ಲ. ಕಲಂ 371 (ಜೆ) ಯನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ಹೇಳಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿ ತೋರಿಸಿದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರ ಎಂದಿಗೂ ಮಾತಿಗೆ ತಪ್ಪುವುದಿಲ್ಲ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಹೇಳಿಸಿರುವ ಗ್ಯಾರಂಟಿ ಯೋಜನೆಗಳು ಹಾಗೂ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಜಾರಿ ಮಾಡದೇ ಇರುವುದಿಲ್ಲ ಎಂದರು.

ಈ ವೇಳೆ ಉಪಮುಖ್ಯಮಂತ್ರಿ ಡಿಕೆಶಿ,
ಇಂಧನ ಸಚಿವ ಕೆ.ಜೆ.ಜಾರ್ಜ್, ರಾಜ್ಯಸಭಾ ಸದಸ್ಯ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಸಚಿವ ಸಂಪುಟದ ಸದಸ್ಯರು, ಶಾಸಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *