ಇದೇ ನವೆಂಬರ್ 10 ರಿಂದ 14 ರವರೆಗೆ ಅಸ್ಸಾಂನ ಗುವಾಹಾಟಿಯಲ್ಲಿ ನಡೆದ 5ನೇ ರಾಷ್ಟ್ರೀಯ ಸಬ್ – ಜ್ಯೂನಿಯರ್ ಹಾಗೂ ಜೂನಿಯರ್ ಯೋಗಾಸನ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕದ KYSA ತಂಡವನ್ನು ಪ್ರತಿನಿಧಿಸಿ 10-14 ವಯಸ್ಸಿನ ವಯೋಮಿತ ರಿಧಮಿಕ್ ಪೇರ್ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಯೋಗಪಟು ಹೃತಿಕ್ ಜಿ.ಸಿ ಹಾಗೂ ಪ್ರಣವ್ ನಾಡಿಗ್ ಭಾಗವಹಿಸಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಈ ಮೂಲಕ ಖೆಲೋ ಇಂಡಿಯಾ ಯೂತ್ ಗೇಮ್ಸ್ -2024 ಗೆ ಆಯ್ಕೆಯಾಗಿರುತ್ತಾರೆ. ಇವರನ್ನು KYSA ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎಂ ನಿರಂಜನ್ ಮೂರ್ತಿ ಹಾಗೂ ಕರ್ನಾಟಕ ಯೋಗ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಯೋಗ ಶಿಕ್ಷಕರಾದ ರಘು ಹೆಚ್.ಜಿ ಹಾಗೂ ಮೊಹಮ್ಮದ್ ಫರೋಜ್ ಶೇಖ್, ಡ್ಯಾನ್ಸ್ ಕೊರಿಯೋಗ್ರಾಫರ್ ಆನಂದ್ ಮತ್ತು ಮಾರುತಿ ವ್ಯಾಯಮ ಶಾಲೆಯ ಟ್ರಸ್ಟಿ ಗಳು ಅಭಿನಂದಿಸುತ್ತಾರೆ.
ಸ್ಮರಣ ಶಕ್ತಿ ಮತ್ತು ಸದೃಢ ಆರೋಗ್ಯಕ್ಕಾಗಿ ಚಿಕ್ಕ ವಯಸ್ಸಿಂದ ನಮ್ಮ ಮಗನನ್ನು ಯೋಗ ಕಲಿಯಲು ಸೇರಿಸಿದ್ದು, ಈಗ ಅದೇ ಕ್ಷೇತ್ರದಲ್ಲಿ ವಿವಿಧ ಕ್ಲಿಷ್ಟಕರ ಆಸನಗಳನ್ನ ಮಾಡುವ ಮೂಲಕ ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೃತಿಕ್ ಜಿ.ಸಿ ಪೋಷಕರು ಹೇಳಿದ್ದಾರೆ.
ನಮ್ಮ ಮಗನ ಈ ಎಲ್ಲಾ ಸಾಧನೆಗಳಿಂದ ನಮಗೆ ಖುಷಿ ತಂದಿದೆ. ಮನೆಯಲ್ಲಿ ಹಾಗೂ ಯೋಗ ತರಬೇತಿ ಕೇಂದ್ರದಲ್ಲಿ ಪ್ರತಿದಿನ ಕಠಿಣ ಅಭ್ಯಾಸ ಮಾಡುತ್ತಿರುತ್ತಾನೆ. ಅದೇರೀತಿ ಓದುವ ಕಡೆಗೂ ಗಮನ ಹರಿಸುತ್ತಾನೆ. ನಮ್ಮ ಮಗ ನಮ್ಮ ಹೆಮ್ಮೆ ಎಂದು ಹೃತಿಕ್ ಜಿ.ಸಿ ಸಾಧನೆಗೆ ಪೋಷಕರು ಹೆಮ್ಮೆಯ ಮಾತುಗಳನ್ನಾಡಿದರು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಳ್ಳದೇ ಪ್ರತಿದಿನ ಯೋಗ ಮಾಡಿ ಆರೋಗ್ಯವನ್ನ ಸ್ಥಿರವಾಗಿ ಕಾಪಾಡಿಕೊಳ್ಳಬೇಕು ಎಂದು ಯೋಗಪಟು ಹೃತಿಕ್ ಜಿ.ಸಿ ಹೇಳಿದರು.
ನಾನು ಓದುವ ಜೊತೆಗೆ ಯೋಗಾಭ್ಯಾಸ ಮಾಡುತ್ತೇನೆ. ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ. ಇದಕ್ಕೆಲ್ಲ ನನ್ನ ಯೋಗ ಟೀಚರ್ ಹಾಗೂ ನನ್ನ ತಂದೆ-ತಾಯಿ. ಯೋಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲ ನನಗಿದೆ. ಈ ನಿಟ್ಟಿನಲ್ಲಿ ಅಭ್ಯಾಸ ಮಾಡುವೆ. ಎಲ್ಲರೂ ಯೋಗ ಮಾಡಿ ಆರೋಗ್ಯದಿಂದಿರಿ ಎಂದು ಹೇಳಿದರು.
ಯೋಗ ಶಿಕ್ಷಕ ರಘು ಹೆಚ್.ಜಿ ಮಾತನಾಡಿ, ಆಧುನಿಕ ಯುಗದ ಮಕ್ಕಳು ಮೊಬೈಲ್, ಟೆಲಿವಿಷನ್, ಪ್ರೀತಿ-ಪ್ರೇಮ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಕೆಟ್ಟಚಟಗಳಿಗೆ ಒಳಗಾಗಿ, ಮಾನಸಿಕವಾಗಿ ಖಿನ್ನತೆಯಿಂದ ಬಳಲಿ, ಕೊನೆಗೆ ಅನಾರೋಗ್ಯ ಪೀಡಿತರಾಗಿಯೋ ಅಥವಾ ಆತ್ಮಹತ್ಯೆ ಮಾಡಿಕೊಂಡೋ ತಮ್ಮ ಉಜ್ವಲ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣುಮುಂದಿವೆ. ಕೆಟ್ಟಚಟಗಳಿಂದ ದೂರವಿದ್ದು, ಉತ್ತಮ ಭವಿಷ್ಯ, ಆರೋಗ್ಯದಿಂದ ಇರಲು ಯೋಗ ಬಹಳ ಮುಖ್ಯ. ಈ ಹಿನ್ನೆಲೆ ಎಲ್ಲರು ಯೋಗ ಮಾಡಲೇಬೇಕು ಎಂದು ಹೇಳಿದರು.