
ದೊಡ್ಡಬಳ್ಳಾಪುರ : ಗಿಡಗಂಟೆಗಳಿಂದ ಅವರಿಸಿದ್ದ ಗುಡ್ಡ ಪ್ರದೇಶ, ಗಿಡ ಕಿತ್ತು ಭೂಮಿ ಸಮತಟ್ಟು ಮಾಡಿದ ರೈತ ಕಳೆದ 40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ, ಭೂ ಮಂಜೂರಾತಿಯ ನಿರೀಕ್ಷೆಯಲ್ಲಿದ್ದ ಸಾಗುವಳಿದಾರನ ಜಮೀನು ಬೇರೊಬ್ಬ ವ್ಯಕ್ತಿಗೆ ಮಂಜೂರಾಗಿದೆ, 40 ವರ್ಷಗಳ ಶ್ರಮ ಹಾಕಿದ ಭೂಮಿಯನ್ನ ಬೀಡುವಂತೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ರೈತ ಮುತ್ತುರಾಜ್ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತಂಬೇನಹಳ್ಳಿಯ ಸರ್ವೆ ನಂಬರ್ 15ರ ಸರ್ಕಾರಿ ಗೋಮಾಳದಲ್ಲಿನ 2 ಎಕರೆ ಜಾಗದಲ್ಲಿ ರೈತ ಮುತ್ತುರಾಜ್ ಸಾಗುವಳಿ ಮಾಡುತ್ತಿದ್ದಾರೆ. ಅವರ ತಂದೆ ತಾಡಪ್ಪ ಕಳೆದ 40 ವರ್ಷಗಳಿಂದ ಈ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ, ಮೊದಲಿಗೆ ಗುಡಿಸಿಲಲ್ಲಿ ವಾಸವಾಗಿದ್ದ ಅವರು ಭೂಮಿಯನ್ನ ಸಾಗುವಳಿ ಭೂಮಿಯನ್ನಾಗಿ ಮಾಡಿದ್ದಾರೆ, ಬೇಸಾಯದ ಜೊತೆಯಲ್ಲಿ ಹಲಸಿನ ಮರಗಳನ್ನ ಬೆಳೆದಿದ್ದಾರೆ, ಇತ್ತಿಚೇಗೆ ಸಾಧರಣ ಮನೆಯನ್ನ ಕಟ್ಟಿಕೊಂಡು ವಾಸವಾಗಿದ್ದಾರೆ, ರಾಗಿ, ಜೋಳ, ಅಲಸಂದಿ, ಅವರೆ, ತೊಗರಿ ಬೆಳೆದು ಜೀವನ ಮಾಡುತ್ತಿದ್ದಾರೆ, ಭೂ ಮಂಜೂರಾತಿಗಾಗಿ ತಹಶೀಲ್ದಾರ್ ಕಛೇರಿಗೆ ಅರ್ಜಿಯನ್ನ ಸಲ್ಲಿಸಿದರು, ಇಂದಲ್ಲಾ ನಾಳೆ ತಮ್ಮ ಹೆಸರಿಗೆ ಜಮೀನು ಮಂಜೂರಾತಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದೇ ಜಾಗ ಚೌಡಮ್ಮ ಎಂಬುವರ ಹೆಸರಿಗೆ ಮಂಜೂರಾತಿಯಾಗಿದೆ, ಹೊಲ ಮನೆ ಬಿಟ್ಟು ಹೋಗುವಂತೆ ಮುತ್ತುರಾಜ್ ಕುಟುಂಬ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಮುತ್ತುರಾಜ್, ಕಳೆದ 40 ವರ್ಷಗಳಿಂದ ನಾವು ಈ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದೇವೆ, ರೈತನ ಹೆಸರಿಗೆ ಖಾತೆ ಮಾಡುವ ಮುನ್ನ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಮಹಜರ್ ಮಾಡಿ, ಜಮೀನು ಅಕ್ಕಪಕ್ಕ ರೈತನ ಸಹಿ ಪಡೆದು, ನೈಜ ವರದಿಯ ಮೇಲೆ ಸಾಗುವಳಿ ಚೀಟಿ ಮತ್ತು ರೈತನ ಹೆಸರಿಗೆ ಪಹಣಿ ಮಾಡ ಬೇಕು. ಆದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ, ಸ್ದಾಧೀನದಲ್ಲಿರುವ ನಮ್ಮನ್ನು ಕೇಳದೆ, ನಾವು ಸಾಗುವಳಿ ಮಾಡುತ್ತಿರುವ ಜಮೀನನ್ನ ಚೌಡಮ್ಮರವರಿಗೆ ಮಂಜೂರು ಮಾಡಿ ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ರೈತ ಮುನೇಗೌಡ ಮಾತನಾಡಿ, ಮುತ್ತುರಾಜ್ ಕುಟುಂಬ ಕಳೆದ 40 ವರ್ಷಗಳಿಂದ ಈ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ನಾವೇಲ್ಲ ಭೂ ಮಂಜೂರಾತಿಗಾಗಿ ತಹಶೀಲ್ದಾರ್ ಕಛೇರಿಗೆ ಅರ್ಜಿಯನ್ನ ಹಾಕಿದ್ದೇವು, ಇಲ್ಲಿಯವರೆಗೂ ನಮಗೆ ಸಾಗುವಳಿ ಚೀಟಿ ಸಹ ನೀಡಿಲ್ಲ, ಕಛೇರಿಯಿಂದ ಕಛೇರಿಗೆ ಅಲೆಸುತ್ತಿದ್ದಾರೆ, ಹಣ ನೀಡುವ ರೈತರಿಗೆ ಸಾಗುವಳಿ ಚೀಟಿ, ಪಹಣೆ ಮಾಡಲಾಗುತ್ತಿದೆ ಎಂದರು.

ಚೌಡಮ್ಮರವರ ಅಳಿಯ ರಾಜಣ್ಣ ಮಾತನಾಡಿ, ಚೌಡಮ್ಮ ಭೂ ಮಂಜೂರಾತಿ ಅರ್ಜಿ ಹಾಕಿದ್ದು, ಆದರ ಆಧಾರ ಮೇಲೆ ಭೂ ಮಂಜೂರಾತಿಯಾಗಿದೆ, ಭೂ ಮಂಜೂರಾತಿ ಮುನ್ನ ಚೌಡಮ್ಮರವರ ಜಮೀನು ಯಾವುದೆಂದ್ದು ಗೊತ್ತಿರಲಿಲ್ಲ, ಮಂಜೂರಾತಿಯಾದ ನಂತರ ಚೌಡಮ್ಮ ಜಾಗ ಇದೆ ಎಂದು ತಿಳಿದು ಬಂದಿದೆ, ಜಾಗ ಆದಲಿ ಬದಲಿಯಾಗಿದೆ, ಆ ಕಾರಣಕ್ಕೆ ಜಮೀನು ಬಿಡುವಂತೆ ನಾವು ಕೇಳುತ್ತಿರುವುದ್ದಾಗಿ ಹೇಳಿದರು.