
ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್, ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆ, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೋಜಿಪುರ ಇವರುಗಳ ಸಹಯೋಗದಲ್ಲಿ ಡಿ.4 ರಂದು “ತೆರೆದ ಮನೆ” ಕಾರ್ಯಕ್ರಮವನ್ನು ನಡೆಸಲಾಯಿತು.
ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಚಿದಾನಂದ ಮೂರ್ತಿ ಮಾತನಾಡಿ “ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ಇವರುಗಳ ಸಹಯೋಗದಲ್ಲಿ ನಡೆಯುತ್ತಿರುವ “ಎಲ್ಲಾ ಮಕ್ಕಳಿಗೂ, ಎಲ್ಲಾ ಹಕ್ಕುಗಳು (ಹಕ್ಕಿನೊಂದಿಗೆ ಜವಾಬ್ದಾರಿ)” ಅಭಿಯಾನದಡಿ ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವಿಕೆಯ ಹಕ್ಕುಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಮಕ್ಕಳಿಗಾಗಿ ಇರುವ ಕಾರ್ಯಕ್ರಮಗಳು ಮತ್ತು ಯೋಜನೆಗಳು ತಲುಪುವಂತೆ ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಅಭಿಯಾನದಡಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪೊಲೀಸ್ ಠಾಣೆಯನ್ನು ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ “ತೆರೆದ ಮನೆ” ಕಾರ್ಯಕ್ರಮವನ್ನು ನಮ್ಮ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೋಜಿಪುರ ಇವರುಗಳೊಂದಿಗೆ ಮಾತನಾಡಿ ಕಾರ್ಯಕ್ರಮವನ್ನು ಎಲ್ಲರ ಸಹಯೋಗದಲ್ಲಿ ನಡೆಸಲಾಗುತ್ತಿದೆ” ಎಂದು ತಿಳಿಸಿದರು.
ಮಕ್ಕಳನ್ನು ಬಸ್ ನಲ್ಲಿ ಠಾಣೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಅಮರೇಶ್ ಗೌಡ ಎ ರವರು ಈ ವ್ಯವಸ್ಥೆಯನ್ನು ಮಕ್ಕಳಿಗಾಗಿ ಮಾಡಿದ್ದರು. ಠಾಣೆಯ ತನಿಖಾ ಸಹಾಯಕರಾದ ಮುನಿರಾಜುರವರು ಮಕ್ಕಳಿಗೆ ಠಾಣೆಯ ಬೇರೆ ಬೇರೆ ವಿಭಾಗಗಳು, ಎಫ್ ಐ ಆರ್ ನೋಂದಣಿ ಪ್ರಕ್ರಿಯೆ, ಮಹಿಳಾ ಸಹಾಯವಾಣಿ, ಉಪಯೋಗಿಸುವ ಶಸ್ತ್ರಗಳು ಇತ್ಯಾದಿ ಮಾಹಿತಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ನೀಡಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಮಕ್ಕಳಿಗೆ ಬಾಲ್ಯ ವಿವಾಹ, ಬಾಲಕಾರ್ಮಿಕತೆ ಹಾಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ನೀಡಿ ನೇರ ಸಂವಾದ ಹಾಗೂ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಿದರು.
ಕಾರ್ಯಕ್ರಮದಲ್ಲಿ ರೋಜಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ಮಕ್ಕಳು ಹಾಗೂ ಶಿಕ್ಷಕರು, ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆಯ ಎಲ್ಲಾ ಆರಕ್ಷಕರು ಸಿಬ್ಬಂದಿ ವರ್ಗದವರು, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ನವೀನ್ ಹಾಗೂ ಸ್ವಯಂಸೇವಕರಾದ ರತ್ನ, ಕೀರ್ತಿ ಮತ್ತು ಲಾವಣ್ಯ ಇವರುಗಳು ಉಪಸ್ಥಿತರಿದ್ದರು.