ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ  ನಾನು ಗೌರವಯುತವಾಗಿ ಆಹ್ವಾನ ನೀಡಿದ್ದೇನೆ- ಸಂಸದ ಬಿ.ವೈ ರಾಘವೇಂದ್ರ

ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂಚಿತವಾಗಿ ಅಂದರೆ ಇದೇ ತಿಂಗಳ ಜುಲೈ 09 ರಂದು ಅಂಬಾರಗೋಡ್ಲು – ಕಳಸವಳ್ಳಿ – ಸಿಗಂದೂರು ಸೇತುವೆ ಉದ್ಘಾಟನೆಗೆ ನಾನು ಗೌರವಯುತವಾಗಿ ಆಹ್ವಾನ ನೀಡಿದ್ದೇನೆ. ಆದರು ಹಿರಿಯರಾದ ಸಿದ್ದರಾಮಯ್ಯ ಅವರು ಆಹ್ವಾನ ತಲುಪಿರುವುದು ತಡವಾಗಿದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದು ಎಷ್ಟು ಸಮಂಜಸ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಹೇಳಿದ್ದಾರೆ.

ಶರಾವತಿ ನದಿಗೆ ಕಟ್ಟಿರುವ ಈ ಸೇತುವೆ ಆರು ದಶಕಗಳ ಸಾವಿರಾರು ಜನರ ಹೋರಾಟದ ಬೆವರಿನ ಪ್ರತಿಫಲ. ಇಷ್ಟು ಮಾತ್ರವಲ್ಲದೆ, ಸಾವಿರಾರು ಜನರ ಭಾವನೆಗಳ ಪ್ರತಿರೂಪ. ಅವರೆಲ್ಲರ ಭಾವನೆಗಳಿಗೆ ಘಾಸಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ವಿವಿಧ ವಿಚಾರಗಳಲ್ಲಿ ಪರಸ್ಪರ ರಾಜಕೀಯ ಮಾಡುವುದು ಸರಿ. ಆದರೆ ಆಹ್ವಾನ ಪತ್ರಿಕೆ ಮುಂಚಿತವಾಗಿ ತಲುಪಿಯು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಶರಾವತಿ ಹಿನ್ನೀರಿನ ಪ್ರದೇಶದ ಜನತೆಗೆ ನೀವು ಮಾಡುವ ಅವಮಾನ ಎಂದು ಭಾವಿಸುತ್ತೇನೆ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ತಮ್ಮ ಹೇಳಿಕೆ ಹಿಂಪಡೆದು ನಿಜಾಂಶ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಇಷ್ಟಲ್ಲದೆ, ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರು ಇದೇ ತಿಂಗಳ ಜುಲೈ 11 ರಂದು ಖುದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಧಿಕೃತವಾಗಿ ಆಹ್ವಾನ ನೀಡಿರುತ್ತಾರೆ ಎಂಬುದನ್ನು ಕ್ಷೇತ್ರದ ಜನತೆಯ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!