ಸಿಸಿಬಿಯ ಮಾದಕವಸ್ತು ನಿಗ್ರಹ ದಳವು ಕಾನೂನು ಬಾಹಿರವಾಗಿ ಇ-ಸಿಗರೇಟ್ ಗಳನ್ನು ಮಾರುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ. ಈ ಕಾರ್ಯಾಚರಣೆ ವೇಳೆ ₹30 ಲಕ್ಷ ಮೌಲ್ಯದ 1,180 ಇ-ಸಿಗರೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ 2019ರ ಇ-ಸಿಗರೇಟ್ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ತಿಳಿಸಿದರು.
ಸರಣಿ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಈತನಿಂದ ₹9.00 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡಿನ 44 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸರಣಿ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಈತನಿಂದ ₹5.00 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡಿನ 23 ಮೊಬೈಲ್ ಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.
ಸರಣಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಪೀಣ್ಯ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದು, ಕಳ್ಳತನವಾದ ₹5 ಲಕ್ಷ ಮೌಲ್ಯದ 20 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹ 15 ಪ್ರಕರಣಗಳು ದಾಖಲಾಗಿವೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದರು.
ಈ ಮಧ್ಯೆ ವಿದ್ಯಾರಣ್ಯಪುರ ಪೊಲೀಸರು ರಾತ್ರಿವೇಳೆ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದು, ಇವರು ವಾಹನಗಳ ಇಂಜಿನ್ ಹಾಗೂ ಚಸ್ಸಿ ಸಂಖ್ಯೆಯನ್ನು ಬದಲಿಸಿ, ನಕಲಿ ವಾಹನ ದಾಖಲೆ ಸೃಷ್ಟಿಸಿ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದರು. ಇವರನ್ನು ಬಂಧಿಸಿ 25 ದ್ವಿಚಕ್ರ ವಾಹನಗಳು, 6 ಮೊಬೈಲ್ ಗಳು, 2 ಲ್ಯಾಪ್ ಟಾಪ್ ಗಳು, ಕಲರ್ ಪ್ರಿಂಟರ್ ಸೇರಿದಂತೆ ಒಟ್ಟು ₹26.00 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದಿರಾ ನಗರ ಪೋಲೀಸರು ಮೂವರು ಅಂತರ ರಾಜ್ಯ ಆರೋಪಿಗಳನ್ನು ಬಂಧಿಸಿದ್ದು, ಇವರಿಂದ ಕಳ್ಳತನವಾಗಿದ್ದ ₹5.85 ಲಕ್ಷ ಮೌಲ್ಯದ 7 ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಕಾರಿನ ಗಾಜು ಒಡೆದು ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ ಎಂದು ಹೇಳಿದರು.