ದೊಡ್ಡಬಳ್ಳಾಪುರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಜಾಪ್ರಭುತ್ವ ರಕ್ಷಣೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ವಿದ್ಯಾರ್ಥಿನಿಲಯ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶೈಕ್ಷಣಿಕ ಘಟಕಗಳ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಸಂಕಲ್ಪ ಮಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಇಂದು ಜಾಗತಿಕ ಮಟ್ಟದಲ್ಲಿ ಸದೃಢ ಹಾಗೂ ಸೌಹಾರ್ದಯುತ ಸಮಾನ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಗಲ್ಲಾಗಿದ್ದು, ಭಾರತ ಪ್ರಜಾಪ್ರಭುತ್ವದ ತಾಯಿ ಎನಿಸಿದೆ. ಜಗತ್ತಿನ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅನನ್ಯತೆಯನ್ನು ಉಳಿಸಿಕೊಂಡಿದೆ ಎಂದರು.
ಪ್ರಾಧ್ಯಾಪಕ ರವಿಕಿರಣ್, ಸಂವಿಧಾನ ಪೀಠಿಕೆ ಹಾಗೂ ಪ್ರಜಾಪ್ರಭುತ್ವ ರಕ್ಷಣೆಯ ಸಂಕಲ್ಪ ವಿಧಿಯನ್ನು ಬೋಧಿಸಿದರು.
ಮಾನವ ಸಂಪನ್ಮೂಲ ಅಧಿಕಾರಿ ಬಾಬುರೆಡ್ಡಿ, ಶೈಕ್ಷಣಿಕ ಘಟಕಗಳ ಮುಖ್ಯಸ್ಥರಾದ ವಿಜಯ್‌ಕಾರ್ತಿಕ್, ನಾಗರಾಜ್, ಮಹಂತೇಶಪ್ಪ, ಚಿಕ್ಕಣ್ಣ, ನರಸಿಂಹರೆಡ್ಡಿ, ರವಿಕುಮಾರ್, ಧನಂಜಯ್, ಜಿಯಾವುಲ್ಲಾ, ಎಇಇ ರಮೇಶ್‌ಕುಮಾರ್, ವಾರ್ಡನ್ ಶಂಕರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವಾಹನ ಉಸ್ತುವಾರಿ ವಿಶ್ವನಾಥ್ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ, ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿ, ತಾಲೂಕಿನ ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮೆಷ್ಟ್ರುಮನೆ ಕ್ರಾಸ್‌ನಿಂದ ಕೊಡಿಗೇಹಳ್ಳಿ ಮಾರ್ಗವಾಗಿ ಕುರುಬರಹಳ್ಳಿಯವರೆಗೆ ಸುಮಾರು 3 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾದರು.