
ಆಕೆ ನೋಡಲು ಸುರ ಸುಂದರಿ. ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಯುವಕರಿಗೆ ಬಲೆ ಬೀಸುತ್ತಿದ್ದಳು. ಇವಳ ಮಾಯಾ ಜಾಲಕ್ಕೆ ಬಲಿಯಾಗಿದ್ದು ಮಾತ್ರ ಡಿಲಿವರಿ ಬಾಯ್. ಊರೂರು ಅಲೆದು ಜೀವನ ಸಾಗಿಸುತ್ತಿದ್ದ ಯುವನ ಬಳಿ ಮದುವೆಯ ಆಟ ಆಡಿ ಲಕ್ಷ ಲಕ್ಷ ಹಣ ದೋಚಿರುವ ಆರೋಪ ಕೇಳಿ ಬಂದಿದೆ.

ಹೌದು ಹೀಗೆ ಪೋಲೀಸ್ ಠಾಣೆಯ ಮುಂದೆ ಹೆಂಡತಿ ಜೊತೆಗೆ ಇರುವ ಫೋಟೋ ತೋರಿಸುತ್ತಿರುವ ಗಂಡ, ತನ್ನ ಬಳಿ ಹಣ ಹಾಕಿಸಿಕೊಂಡಿರುವ ಲಿಸ್ಟ್ ತೋರಿಸುತ್ತಿರುವ ಮತ್ತೊಬ್ಬ ಯುವಕ, ನ್ಯಾಯ ಬೇಕು ಎಂದು ಇಬ್ಬರು ಅಳಲು ತೋಡಿಕೊಳ್ಳುತ್ತಿರುವ ಇಬ್ಬರು ಗಂಡಂದಿರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲ ಪೋಲೀಸ್ ಠಾಣೆ ಬಳಿ.

ಹೌದು ದೊಡ್ಡಬಳ್ಳಾಪುರದ ಹಣಬೆ ಗ್ರಾಮದ ಸುಧಾರಾಣಿ(31) ಇಬ್ಬರು ಗಂಡಂದಿರಿಗೆ ಮೋಸ ಮಾಡಿರುವ ಆರೋಪ ಹೊತ್ತ ಮಹಿಳೆ.

ಈಕೆ ಕಳೆದ ಏಳೆಂಟು ವರ್ಷಗಳ ಹಿಂದೆ ಹಿರೇಗೌಡ ಎಂಬ ವ್ಯಕ್ತಿಯೊಂದಿಗೆ ಮದುವೆ ಆಗಿದ್ದಳಂತೆ. ಇಬ್ಬರೂ ಪ್ರಾರಂಭದಲ್ಲಿ ಅನ್ಯೋನ್ಯವಾಗಿಯೇ ಇದ್ದರು. ಇವರಿಬ್ಬರ ಪ್ರೀತಿಗೆ ಒಂದು ಗಂಡು ಮತ್ತೊಂದು ಹೆಣ್ಣು ಮಗಿವಿದೆ. ಆದರೆ ಇವರ ಸಂಸಾರದಲ್ಲಿ ಬಿರುಕು ಬಂದ ಹಿನ್ನಲೆ ಕಳೆದ ಮೂರು ವರ್ಷದಿಂದ ಇಬ್ಬರು ದೂರವಿದ್ದರಂತೆ. ಇದನ್ನೆ ಬಂಡವಾಳ ಮಾಡಿಕೊಂಡ ಮಹಿಳೆ ಬೇರೆ ಬೇರೆ ಯುವಕರಿಗೆ ಬಲೆ ಬೀಸಿದ್ದಾಳೆ.

ಇನ್ನೂ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬ ಯುವಕನಿಗೆ ಸುಧಾರಾಣಿ ಬಲೆ ಬೀಸಿದ್ದಾಳೆ. ಆನ್ ಲೈನ್ ನಲ್ಲಿ ವಸ್ತುಗಳನ್ನು ಬುಕ್ ಮಾಡಿಕೊಂಡಿದ್ದ ವೇಳೆ ಡಿಲಿವರಿಗೆ ಬಂದಾಗ ನಂಬರ್ ತೆಗೆದುಕೊಂಡು ಮೊದಲು ಸ್ನೇಹ ಬೆಳೆಸಿದ್ದಾಳೆ. ಸ್ನೇಹ ನಂತರ ಪ್ರೀತಿಯಾಗಿ, ನನ್ನ ಗಂಡ ತೀರಿಹೋಗಿದ್ದಾನೆ ಎಂದು ಸುಳ್ಳು ಹೇಳಿ ಮದುವೆ ಆಗಿದ್ದಳಂತೆ. ಪಾಪ ಒಂಟಿ ಮಹಿಳೆ ಜೀವನ ಕಟ್ಟಿಕೊಡೋಣಾ ಅಂತ ಹೇಳಿ, ಒಳ್ಳೆಯ ಮನಸ್ಸಿನಿಂದ ಮದುವೆ ಆಗಿದ್ದಾನೆ. ಇಬ್ಬರೂ ಸೇರಿ ಒಂದು ವರ್ಷಕ್ಕೂ ಹೆಚ್ಚು ದಿನ ಸಂಸಾರ ಮಾಡಿದ್ದರಂತೆ. ಈ ವೇಳೆ ಆರೋಗ್ಯ ಸರಿ ಇಲ್ಲ, ಸಂಬಂಧಿಕರಿಗೆ ಸಮಸ್ಯೆ ಆಗಿದೆ ಎಂದು ಕುಂಟು ನೆಪ ಹೇಳಿಕೊಂಡು 15 ರಿಂದ 20 ಲಕ್ಷ ಹಣ ದೋಚಿದ್ದಾಳೆ ಎಂದು ಎರಡನೇ ಗಂಡ ಅನಂತಮೂರ್ತಿ ಆರೋಪ ಮಾಡಿದ್ದಾನೆ. ಆದರೆ ಈಗ ಇವರಿಬ್ಬರನ್ನೂ ಬಿಟ್ಟು ಮೂರನೇ ಮದುವೆ ಆಗಿದ್ದಾಳೆ ಎಂದು ಇಬ್ಬರು ಗಂಡಂದಿರು ಆರೋಪ ಮಾಡುತ್ತಿದ್ದಾರೆ. ಇನ್ನೂ ಎರಡನೇ ಗಂಡ ನಾನು ಕೊಟ್ಟ ಹಣ ವಾಪಸ್ ಕೊಡಿ ಎಂದು ಕೇಳಿಕೊಂಡರೆ, ಮೊದಲನೇ ಗಂಡ ನನ್ನ ಮಕ್ಕಳನ್ನು ನನ್ನ ಬಳಿಗೆ ಕಳಿಸಿಕೊಡಿ ಎಂದು ಆಗ್ರಹಿಸುತ್ತಿದ್ದಾನೆ. ಇನ್ನೂ ಘಟನೆ ಕುರಿತು ಮಹಿಳೆ ಮತ್ತು ಎರಡನೇ ಗಂಡ ದೂರು ಮತ್ತು ಪ್ರತಿ ದೂರು ನೀಡಿದ್ದಾರೆ.

ಒಟ್ಟಾರೆ ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಗಂಡಂದಿರಿಗೆ ಮೋಸ ಮಾಡಿ ಪೋಲೀಸ್ ಠಾಣೆ ಮೆಟ್ಟಿಲು ತುಳಿದ್ದಾಳೆ. ಪೋಲೀಸರು ಯುವಕರಿಗೆ ಯಾವ ರೀತಿ ನ್ಯಾಯ ಒದಗಿಸುತ್ತಾರೆ ಕಾದು ನೋಡಬೇಕಿದೆ.