ಮರಾಠಿ ಮಾತನಾಡದ ಕರ್ನಾಟಕದ ಬಸ್ ಕಂಡಕ್ಟರ್ ಮೇಲಿನ ದಾಳಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಪುಂಡಾಟಿಕೆ ವಿರುದ್ಧ ಕನ್ನಡ ಶಕ್ತಿಗಳು ಒಂದಾಗಿವೆ. ಭಾಷಾಗ್ನಿಯ ಕುಂಡವಾಗಿ ಮಾರ್ಪಟ್ಟಿರುವ ಬೆಳಗಾವಿಗೆ ಈಗಾಗಲೇ ಕನ್ನಡಪರ ಸಂಘಟನೆಗಳ ನಾಯಕರು ಕಾಲಿಟ್ಟಿದ್ದು, ಎಂಇಎಸ್ ಮರಾಠಿ ಪುಂಡರ ಗುಂಪಿನ ದೌರ್ಜನ್ಯವನ್ನು ಅಂತ್ಯಗೊಳಿಸುವ ಶಪಥ ಮಾಡಿದ್ದಾರೆ.
ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಜಘಟ್ಟ ರವಿ ನೇತೃತ್ವದ ತಂಡ ಇಂದು ದೇವನಹಳ್ಳಿ-ದೊಡ್ಡಬಳ್ಳಾಪುರ ನಡುವೆ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಬಹಳ ಶಾಂತಿಯುತವಾಗಿ ಮಹಾರಾಷ್ಟ್ರದ ವಾಹನಗಳನ್ನು ನಿಲ್ಲಿಸಿ ವಾಹನ ಚಾಲಕರಿಗೆ ಗುಲಾಬಿ ಹೂ ಹಾಗೂ ಸಿಹಿ ಕೊಟ್ಟು ಸನ್ನಡತೆಯಿಂದ ನಡೆಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿನ ಎಂಇಎಸ್ ಪುಂಡರಿಗೆ ನಿಮ್ಮ ವಾಹನಗಳು ನಮ್ಮಲ್ಲಿಗೆ ಬರುತ್ತೆ ಅಂತ ಎಚ್ಚರಿಕೆಯನ್ನು ನೀಡಿದ್ದಾರೆ. ನಮ್ಮ ಸನ್ನಡತೆಯನ್ನು ಮಹಾರಾಷ್ಟ್ರದಲ್ಲಿನ ಎಂಇಎಸ್ ಅವರಿಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.
ಈ ವೇಳೆ ಕರವೇ ಮುಖಂಡ ರಾಜಘಟ್ಟ ರವಿ ಮಾತನಾಡಿ, ಹಿಂಸೆಯಿಂದ ಏನನ್ನು ಸಾಧಿಸುವುದಕ್ಕೆ ಆಗೋದಿಲ್ಲ. ನಾವು ಅವರ ರೀತಿ ಕಾನೂನಿನ ಎಲ್ಲೆ ಮೀರುವುದಿಲ್ಲ. ಮಹಾರಾಷ್ಟ್ರದವರಿಗೆ ಹೂ, ಸಿಹಿ ಹಂಚಿ ಗೌರವ ಕೊಟ್ಟು ಸುರಕ್ಷಿತವಾಗಿ ಕಳುಹಿಸಿಕೊಡುತ್ತಿದ್ದೇವೆ. ಇದು ನಮ್ಮ ಕರ್ನಾಟಕ ಜನತೆಯ ಒಳ್ಳೇತನ. ನಮ್ಮ ಹೋರಾಟ ಏನಿದ್ದರು ಎಂಇಎಸ್ ಮರಾಠಿ ಪುಂಡರ ವಿರುದ್ಧ, ನಮ್ಮ ಆಕ್ರೋಶ ಕನ್ನಡ ವಿರೋಧಿಗಳ ಮೇಲೆ, ಶಿವಸೇನೆ ಪುಂಡರ ಮೇಲೆ ಹೊರೆತು ಅಲ್ಲಿನ ಅಮಾಯಕರ ಮೇಲೆ ಅಲ್ಲ ಎಂದು ಹೇಳಿದರು.