ದೊಡ್ಡಬಳ್ಳಾಪುರ: ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯವನ್ನು ಕಳೆದ 2,411 ದಿನಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಅನ್ನದಾಸೋಹಿ ಮಲ್ಲೇಶ್ ಮತ್ತು ತಂಡದ ಸೇವೆಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ತಾಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಅನ್ನದಾಸೋಹ ಸಮಿತಿಯ ವತಿಯಿಂದ ಆಯೋಜಿಸಿದ್ದ 2,411ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ವಕೀಲರು ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರವಿ ಮಾವಿನಕುಂಟೆ, ಅನ್ನದಾಸೋಹಕ್ಕೆ ನೆರವು ನೀಡಿದ ದಾನಿಗಳನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸಿ ಗೌರವಿಸುವುದು ಸಮಿತಿಯ ವಿಶೇಷತೆಯಾಗಿದೆ. ಇಂತಹ ಕಾರ್ಯಕ್ರಮಗಳು ಆರ್ಥಿಕವಾಗಿ ಸಬಲರಾಗಿರುವವರು ಸಮಾಜ ಸೇವೆಗೆ ಮುಂದಾಗಲು ಪ್ರೇರಣೆ ನೀಡುತ್ತವೆ ಎಂದರು.
ಸರ್ಕಾರಗಳು ಹಲವು ಭಾಗ್ಯಗಳನ್ನು ನೀಡುವ ಮೂಲಕ ಬಡವರ ಉದ್ಧಾರ ಮಾಡುತ್ತಿದ್ದೇವೆ ಎನ್ನುತ್ತಿದ್ದರೂ ಸಮಾಜದಲ್ಲಿ ಹಸಿವು ಮತ್ತು ಬಡತನ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಇಂದಿಗೂ ನೂರಾರು ಜನರು ಅನ್ನದಾಸೋಹಕ್ಕೆ ಬರುತ್ತಿರುವುದು ಈ ಸೇವೆಯ ಅನಿವಾರ್ಯತೆಯನ್ನು ತೋರಿಸುತ್ತದೆ. ಯಾವುದೇ ಅಡೆತಡೆಗಳ ನಡುವೆಯೂ 2,411 ದಿನಗಳಿಂದ ಸೇವೆ ಮುಂದುವರಿಸಿರುವ ಮಲ್ಲೇಶ್ ಮತ್ತು ತಂಡದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಖ್ಯಾತ ವೈದ್ಯ ಡಾ. ಅಂಜಿನಪ್ಪ ಮಾತನಾಡಿ, ಮಠ-ಮಂದಿರಗಳಲ್ಲಿ ಅನ್ನದಾಸೋಹ ನಡೆಯುವುದನ್ನು ನೋಡಿದ್ದೇವೆ. ಆದರೆ ಸಾಮಾನ್ಯ ಕಲಾವಿದರೊಬ್ಬರು ಕೇವಲ ದಾನಿಗಳ ಸಹಕಾರದಿಂದ 2,411 ದಿನಗಳಿಂದ ನೂರಾರು ಜನರಿಗೆ ಆಹಾರ ವಿತರಿಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಮಲ್ಲೇಶ್ ಅವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ರಾಜ್ಯ ಕಾಂಗ್ರೆಸ್ ಪ್ರಮುಖರು ಹಾಗೂ ಸಮಾಜ ಸೇವಕ ಸಾಯಿ ಸತೀಶ್ ತೋಟಯ್ಯ ಮಾತನಾಡಿ, ಸಣ್ಣ ಕಾರ್ಯಕ್ರಮವೆಂದು ಭಾವಿಸಿ ಆಗಮಿಸಿದ್ದ ತಮಗೆ ಇಲ್ಲಿ ನಡೆದಿರುವ ಬೃಹತ್ ಸೇವಾ ಕಾರ್ಯವನ್ನು ಕಂಡು ಸಂತೋಷವಾಗಿದೆ. ನಿರಂತರ ಅನ್ನದಾಸೋಹ ಸಮಿತಿಯ ಮುಂದಿನ ಸೇವಾ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಚಿತ್ರನಟ ಗಣೇಶ್ ರಾವ್ ಕೇಸರ್ಕರ್ ಮಾತನಾಡಿ, ಅನ್ನದಾಸೋಹದ ಜೊತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ ಹಾಗೂ ಬಡವರಿಗೆ ಬಟ್ಟೆ ವಿತರಿಸುವ ಮೂಲಕ ಸಮಿತಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸೇವೆ ತಲುಪುವಂತಾಗಲಿ ಎಂದರು.
ಪತ್ರಕರ್ತ ಟಿ.ವಿ. ಸಂಪಂಗಿ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ, ಯಾವುದೇ ದೊಡ್ಡ ಬೆಂಬಲವಿಲ್ಲದೆ ಕೇವಲ ದಾನಿಗಳ ನೆರವಿನಿಂದ ಇಷ್ಟು ದೀರ್ಘಕಾಲ ಅನ್ನದಾಸೋಹ ನಡೆಸುತ್ತಿರುವುದು ವಿಶೇಷ. ಮಲ್ಲೇಶ್ ಅವರ ಸಾಧನೆ ಮೆಚ್ಚುವಂತದ್ದು ಎಂದರು.
ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಕಾರ್ಯಾಚರಣೆ ಸಮಿತಿ ಇಂಡಿಯಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಹಸಿದವರಿಗೆ ಆಹಾರ ಒದಗಿಸುವುದು ಸುಲಭದ ಕೆಲಸವಲ್ಲ. ಇಂತಹ ಮಹತ್ಕಾರ್ಯವನ್ನು ಮಲ್ಲೇಶ್ ಅವರು ಸತತವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅವರ ಸೇವೆಗೆ ನಮ್ಮ ಸಹಕಾರ ಸದಾ ಇರಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ, ಹಸಿದವರು, ವಯೋವೃದ್ಧರು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ನಿರಂತರ ಅನ್ನದಾಸೋಹ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಕೈಜೋಡಿಸುತ್ತಿರುವ ದಾನಿಗಳನ್ನು ಗುರುತಿಸಿ ಅಭಿನಂದಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲ ದಾನಿಗಳು ಹಾಗೂ ಸೇವಾಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಜೀವ್ ನಾಯಕ್, ರಾಜಘಟ್ಟ ರವಿ, ಪ್ರಭಾ ನಾಗರಾಜ್, ಸುಬ್ರಹ್ಮಣ್ಯ (ಎಂ.ಎಸ್.ವಿ.), ಪಿ.ಸಿ. ಲಕ್ಷ್ಮೀನಾರಾಯಣ, ಪ್ರಮೀಳಾ ಮಹದೇವ್, ಶಶಿಕಲಾ ನಾಗರಾಜು, ಜೆ.ವೈ. ಮಲ್ಲಪ್ಪ, ನಾಗರಾಜ್ ಭಂಡಾರಿ, ಡಾ. ಗುಣವಂತ, ಮಂಜು, ಜಿ. ಸುರೇಶ್, ಡಾ. ಟಿ.ಎಂ. ಸಹದೇಶ್, ನಾಗರಾಜ್, ವಿಜಯ ಬಿರಾದಾರ್, ಲಕ್ಷ್ಮೀ ಶೆಟ್ಟಿಗಾರ್, ಟಿ. ಕೃಷ್ಣಪ್ಪ, ಸಂತೋಷ್, ಸೇಲ್ವಂ, ಕೆ. ಶ್ರೀನಿವಾಸ್, ವೆಂಕಟರಾಜು, ಜಯಂತ್, ಬಾಬುರೆಡ್ಡಿ, ಹರ್ಷಿತ್ ರಾಜ್, ಜಯಕೃಷ್ಣ, ನಾಗರತ್ನಮ್ಮ, ಆರ್. ಸುಜಾತಾ, ಜೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಕ್ಕ, ತಮ್ಮನ ಕೈ ಹಿಡಿದುಕೊಂಡು ರಸ್ತೆ ದಾಟುತ್ತಾ ಇರುವಾಗ ತಮ್ಮ ಕೈ ಹಿಡಿದೇ ಅಕ್ಕನ ಹಿಂದೆ ಪುಟ್ಟ ಪುಟ್ಟ ಹೆಜ್ಜೆ…
ದೊಡ್ಡಬಳ್ಳಾಪುರ: ತಾಲ್ಲೂಕಿನ ಹೊನ್ನಘಟ್ಟ ಗ್ರಾಮದಲ್ಲಿ ಸುಮಾರು ಮೂರೂವರೆ ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಅದನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿದೆ…
ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶ್ರೀ ಕೊಂಗಾಡಿಯಪ್ಪ ಕಾನೂನು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ವಿವಿಧ…
ದೇವನಹಳ್ಳಿ: ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗೃಹಲಕ್ಷ್ಮಿ…
ಕನ್ನಡ ಭಾಷೆ, ನಾಡು, ನುಡಿ ಹಾಗೂ ಸಂಸ್ಕೃತಿಯ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ದೈನಂದಿನ ಜೀವನದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ…
ದೊಡ್ಡಬಳ್ಳಾಪುರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.…