ತಾಲ್ಲೂಕಿನ ಕುಂಟನಹಳ್ಳಿ, ಬೋಕೀಪುರ ಗ್ರಾಮಗಳಲ್ಲಿ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ 23 ಕುರಿ, ಮೇಕೆಗಳನ್ನು ಕಳವು ಮಾಡಿರುವ ಪ್ರಕರಣ ನಡೆದಿದೆ.
ಬುಲೇರೊ ಸರಕು ಸಾಗಾಣಿಕೆ ವಾಹನದಲ್ಲಿ ಬಂದಿರುವ ಕಳ್ಳರು ಕುಂಟನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಆನಂದಮ್ಮ ಚನ್ನಕೇಶವ ಅವರ ಕೊಟ್ಟಿಗೆಯಲ್ಲಿ ಕೂಡಿದ್ದ 15 ಕರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನದ ನಂಬರ್ ಪ್ಲೇಟ್ ಕಾಣದಂತೆ ಬಟ್ಟೆಯನ್ನು ಸುತ್ತಲಾಗಿದೆ.
ಬೋಕಿಪುರದಲ್ಲಿ ನಾಗರಾಜ್, ಭರತ್ ಅವರು ಸಾಕಿದ್ದ ಕುರಿ, ಮೇಕೆಗಳನ್ನು ಕಳವು ಮಾಡಲಾಗಿದೆ. 2023ರಲ್ಲೂ ಕುರಿ,ಮೇಕೆ, ದನಗಳ ಕಳವು ಮಿತಿ ಮೀರಿತ್ತು. ಕಳ್ಳರ ಹಾವಳಿಗೆ ಬೇಸತ್ತ ರೈತರು ಕುರಿ ,ಮೇಕೆಗಳೊಂದಿಗೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ್ದರು. ಅದರೂ ಕಳ್ಳರು ಮಾತ್ರ ಪತ್ತೆಯಾಗಿರಲಿಲ್ಲ.
ಈಗ ಮತ್ತೆ ಕುರಿ, ಮೇಕೆಗಳ ಕಳವು ಪ್ರಾರಂಭವಾಗಿದ್ದು ಜನವರಿಯಲ್ಲಿ ಇದು ಎರಡನೇ ಕಳವು ಪ್ರಕರಣವಾಗಿದೆ.
ಕಳವು ನಡೆದಿರುವ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದಿದ್ದಾರೆ.