2027ಕ್ಕೆ ಜನಗಣತಿ ಶುರು- ಜಿಲ್ಲಾಧಿಕಾರಿ ಎ.ಬಿ ಬಸವರಾಜು

2027 ಕ್ಕೆ ಜನಗಣತಿ ಶುರುವಾಗಲಿದ್ದು ಜಿಲ್ಲೆಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳಲು ಇಂದಿನಿಂದಲೇ ಪೂರ್ವ ಸಿದ್ಧತೆ ಕೈಗೊಂಡು ಗ್ರಾಮ, ಪಟ್ಟಣಗಳ ಗಡಿ ಗುರುತಿಸುವಿಕೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನಗಣತಿ-2027 ಕ್ಕೆ ಸಂಬಂಧಿಸಿದಂತೆ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜನಗಣತಿಯ ಮೂಲ ಉದ್ದೇಶವು ದೇಶದ ಎಲ್ಲಾ ವ್ಯಕ್ತಿಗಳ ಎಣಿಕೆಯನ್ನು ಯಾವುದೇ ಲೋಪದೋಷ ಇಲ್ಲದಂತೆ ಸಿದ್ಧಪಡಿಸುವುದು. ಹಾಗಾಗಿ ಮೊದಲು ಗ್ರಾಮಗಳ ಬೌಂಡರಿ ಗುರುತಿಸುವಿಕೆ ಕಾರ್ಯ ನಡೆಯಲಿದೆ ಎಂದರು.

*ಜನಗಣತಿ-2027 ಹಂತಗಳು*

ಜನಗಣತಿ 2027ಕ್ಕೆ ಸಂಬಂಧಿಸಿದಂತೆ ಹೌಸ್ ಲಿಸ್ಟಿಂಗ್ ಮತ್ತು ಮನೆ ಗಣತಿ (ಹಂತ-01) ಕಾರ್ಯವು ಏಪ್ರಿಲ್ 2026 ರಿಂದ ಸೆಪ್ಟೆಂಬರ್ 2026ರ ಅವಧಿಯಲ್ಲಿ ನಡೆಯಲಿದೆ. ಜನಸಂಖ್ಯೆ ಗಣತಿ ಕಾರ್ಯವು (ಹಂತ-02) ಫೆಬ್ರವರಿ 2027ರಲ್ಲಿ ನಡೆಯಲಿದೆ.

*ಗ್ರಾಮಗಳ ಗಡಿ ಗುರುತಿಸುವಿಕೆ ಕಾರ್ಯ*

ಜನಗಣತಿಯ ನಿರ್ದೇಶನಾಲಯವು 2011ರ ಜನಗಣತಿಯಂತೆ ಗ್ರಾಮ ಮತ್ತು ಪಟ್ಟಣಗಳ ಪಟ್ಟಿ ನೀಡಿದ್ದು ಪರಿಷ್ಕೃತ ಪಟ್ಟಿ ನೀಡಲು ಸೂಚಿಸಿದೆ. ಅದರಂತೆ ಪ್ರಸ್ತುತ ಗ್ರಾಮಗಳು ಮತ್ತು ಪಟ್ಟಣಗಳಿಗೆ ಸಂಬಂಧಿಸಿದಂತೆ ಸೆಕ್ಷನ್-ಎ(ಗ್ರಾಮೀಣ ಪ್ರದೇಶಗಳು) ಮತ್ತು ಸೆಕ್ಷನ್-ಬಿ (ಪಟ್ಟಣ ಪ್ರದೇಶಗಳು) ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಬೇಕಿದೆ. ಗ್ರಾಮಗಳ ಪಟ್ಟಿ ಆಧರಿಸಿ ಗ್ರಾಮಗಳ ಗಡಿ ಗುರ್ತಿಸುವಿಕೆಯಲ್ಲಿ ತಹಶೀಲ್ದಾರ್ ಗಳು ಜವಾಬ್ದಾರಿ ವಹಿಸಬೇಕು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಗಡಿ ಗುರ್ತಿಸುವಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವ ಗ್ರಾಮಗಳು ಬಿಟ್ಟು ಹೋಗಿದೆ, ಯಾವ ಗ್ರಾಮಗಳು ಸೇರ್ಪಡೆ ಆಗಿವೆ, ವ್ಯತ್ಯಾಸಗಳೇನು ಎಂಬುದನ್ನು ದೃಢೀಕರಿಸಿ ಗ್ರಾಮಗಳ, ಪಟ್ಟಣಗಳ ಗಡಿ(ಬೌಂಡರಿ)ಯನ್ನು ಗುರ್ತಿಸಿ ನವೆಂಬರ್ ಅಂತ್ಯದೊಳಗೆ ವರದಿ ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

*ಗ್ರಾಮಗಳ ಪಟ್ಟಿ ವಿವರ*

ದೇವನಹಳ್ಳಿ-230
ಹೊಸಕೋಟೆ-302
ದೊಡ್ಡಬಳ್ಳಾಪುರ-309
ನೆಲಮಂಗಲ-252
ಒಟ್ಟು-1093 ಗ್ರಾಮಗಳ ಗಡಿ ಗುರುತಿಸುವ ಕಾರ್ಯ ನಡೆಯಲಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!