2025-ಹೊಸ ವರ್ಷಾಚರಣೆ: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದ ಜಿಲ್ಲಾಡಳಿತ: 2024-ಡಿ.31ರ ಸಂಜೆ 6ಗಂಟೆಯಿಂದ 2025-ಜ.1ರ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರು, ಪ್ರವಾಸಿಗರು, ವಾಹನಗಳ ಪ್ರವೇಶಕ್ಕೆ ನಿಷೇಧ

ಹೊಸ ವರ್ಷಾಚರಣೆಗೆ ಇನ್ನೇನು ಎರಡು ದಿನಗಳು ಬಾಕಿ ಇದ್ದು, 2025ನೇ ಸಾಲನ್ನು ಬರಮಾಡಿಕೊಂಡು ಅದ್ಧೂರಿ ಸಂಭ್ರಮಾಚರಣೆ ಮಾಡಲು ಸಕಲ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಸಮುದ್ರಮಟ್ಟದಿಂದ 1,486 ಮೀಟರ್ ಎತ್ತರದಲ್ಲಿರುವ ನಂದಿ ಗಿರಿಧಾಮ ಯುವಕ-ಯುವತಿಯರ ನೆಚ್ಚಿನ ತಾಣ ಹಾಗೂ ಹಾಟ್ ಸ್ಪಾಟ್. ಇಲ್ಲಿನ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ಬಣ್ಣಬಣ್ಣ ಹೂಗಳ ವಯ್ಯಾರ. ಸೂರ್ಯೋದಯ ಹಾಗೂ ಸೂರ್ಯಸ್ತ ನೋಡಲು ಲವ್ ಬರ್ಡ್ಸ್, ಪಾರ್ಟಿ ಪ್ರಿಯರು, ನವ ವಿವಾಹಿತರು, ಟೆಕ್ಕಿಗಳು, ಸ್ನೇಹಿತರು ಸೇರಿದಂತೆ ಇತರರು ಇಲ್ಲಿ ಬಂದು ಎಂಜಾಯ್ ಮಾಡುತ್ತಾರೆ. ಪ್ರಕೃತಿ‌ ಮಡಿಲಲ್ಲಿ ಕುಳಿತು ಸೌಂದರ್ಯ ಸವಿಯುತ್ತಾ ಹೊಸ ವರ್ಷವನ್ನು ಅದ್ಧೂರಿಯಾಗಿ ಸೆಲಬ್ರೇಟ್ ಮಾಡಬೇಕು ಎಂದು ಕನಸು ಕೂಡ ಕಂಡಿರುತ್ತಾರೆ. ಆದರೆ, ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಏರಿಕೆ ಮಾಡಿ ಎಲ್ಲರಿಗೂ ಶಾಕ್ ನೀಡಿದೆ.

2024-ಡಿ.31ರ ಸಂಜೆ 6ಗಂಟೆಯಿಂದ 2025-ಜ.1ರ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರು, ಪ್ರವಾಸಿಗರು, ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದ್ದಾರೆ.

ಅತಿಥಿ ಗೃಹಗಳ ಕಾಯ್ದಿರಿಸುವಿಕೆ ಕೂಡ ರದ್ದು ಮಾಡಲಾಗಿರುತ್ತದೆ. ನಂದಿ ಬೆಟ್ಟದಲ್ಲಿ ಹಲವಾರು ಸೂಕ್ಷ್ಮ , ಅಪಾಯಕಾರಿ ಪ್ರದೇಶಗಳು ಇದ್ದು, ಜನಸಂದಣಿಯ ಹೆಚ್ಚಾಗಿ ಅನಾಹುತ ಸಂಭವಿಸುವ ಸನ್ನಿವೇಶ ಇರುತ್ತದೆ. ಅದೇರೀತಿ ಹೊಸಬರಿಗೆ ಇಂತಹ ಸ್ಥಳ ಪರಿಚಯ ಇರುವುದಿಲ್ಲ. ಅನಾಹುತ, ಪ್ರಾಣಿ ಹಾನಿ, ಅಪಾಯ ತಪ್ಪಿಸಲು ಸಲುವಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧ ಹೇರಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *