ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಉಭಯ ನಾಯಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಡಿಕೆ ಶಿವಕುಮಾರ್ ಅವರು ಸ್ವಾಮಿ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ 8 ಸಚಿವರ ವಿವರ
ಎಂ. ಬಿ. ಪಾಟೀಲ್ (ಲಿಂಗಾಯತ)
ಡಾ. ಜಿ. ಪರಮೇಶ್ವರ್ (ದಲಿತ ಬಲ)
ಪ್ರಿಯಾಂಕ್ ಖರ್ಗೆ (ದಲಿತ ಬಲ)
ಕೆ.ಎಚ್. ಮುನಿಯಪ್ಪ (ದಲಿತ ಎಡ)
ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)
ಸತೀಶ್ ಜಾರಕಿಹೊಳಿ (ಪರಿಶಿಷ್ಠ ಪಂಗಡ) (ವಾಲ್ಮಿಕಿ)
ಜಮೀರ್ ಅಹ್ಮದ್ ಖಾನ್ (ಮುಸ್ಲಿಂ)
ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)
ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ವಾಗ್ದಾನ ನೀಡಿದ್ದು, ಅದನ್ನು ಮಾಡಲಿದ್ದೇವೆ. ಇದರ ಜತೆಗೆ ನಾವು ನೀಡಿರುವ ಇತರೆ ಭರವಸೆಗಳನ್ನು ಜಾರಿ ಮಾಡುತ್ತೇವೆ. ಕಳೆದ ಬಾರಿಯ ಸರ್ಕಾರ ಇದ್ದಾಗಲೂ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಾವು ಬಿಜೆಪಿಯವರ ರೀತಿ ಹೇಳುವುದೊಂದು ಮಾಡುವುದು ಮತ್ತೊಂದು ರೀತಿ ಆಡಳಿತ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಪ್ರಧಾನಿ ಮೋದಿ ಅವರು ಈಗ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅವರು ಜಪಾನ್ ಗೆ ತೆರಳಿದಾಗಲೆಲ್ಲಾ ನೋಟು ರದ್ದು ತೀರ್ಮಾನ ಪ್ರಕಟಿಸುತ್ತಾರೆ. ಕಳೆದ ಬಾರಿ ಜಪಾನ್ ಗೆ ತೆರಳಿದಾಗ ಒಂದು ಸಾವಿರ ರೂ. ಮುಖಬೆಲೆ ನೋಟು ರದ್ದು ಮಾಡಿದ್ದರು. ಈ ಬಾರಿ 2 ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದಾರೆ. ಇದರರ್ಥ ಇದರಿಂದ ದೇಶಕ್ಕೆ ಲಾಭವೋ, ನಷ್ಟವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವುದಿಲ್ಲ. ಮೋದಿ ಅವರ ಈ ಕೆಲಸ ದೇಶದ ಜನರಿಗೆ ತೊಂದರೆ ಆಗುತ್ತಿದೆ ಎಂದರು.
ನಮ್ಮ ಸರ್ಕಾರ ರಾಜ್ಯದಲ್ಲಿ ದ್ವೇಷವನ್ನು ಕಿತ್ತೊಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರ್ಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಜಯ ರಾಜ್ಯದ ಜನರಿಗೆ ಸಿಕ್ಕಿರುವ ಗೆಲುವು. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಪ್ರಚಾರ ಆರಂಭವಾಗಿದ್ದು, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಮೂಲಕ. ಇದರ ಜತೆಗೆ ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಗಾಂಧಿ ಹಾಗೂ ಅನೇಕ ನಾಯಕರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದು ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಇದರ ಜತೆಗೆ ಸಾಹಿತಿಗಳು, ಚಿಂತಕರು, ಸಂಘಟನೆ ನಾಯಕರುಗಳು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು, ಧನ್ಯವಾದ ಅರ್ಪಿಸುತ್ತೇನೆ. ರಾಜ್ಯದ ಯುವಕರು, ರೈತರು, ಕಾರ್ಮಿಕರು, ಮಹಿಳೆಯರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಈ ಕಾರ್ಯಕ್ರಮಕ್ಕೆ ಬಂದು ನಮಗೆ ಶುಭ ಕೋರಿ ಆಶೀರ್ವಾದ ಮಾಡಲು ಬಂದಿರುವ ಎಲ್ಲಾ ಪ್ರಮುಖ ನಾಯಕರು ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುತ್ತೇವೆ. ಜನ ಬದಲಾವಣೆ ಬಯಸಿದ್ದು, ನಾವು ಜನರಿಗೆ ಕೊಟ್ಟಿರುವ ಭರವಸೆ, ಗ್ಯಾರಂಟಿ ಯೋಜನೆಗಳನ್ನು ಇವತ್ತೇ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಆದೇಶ ಹೊರಡಿಸಿ ಜಾರಿಗೆ ತರುತ್ತೇವೆ. ಇದು ಕನ್ನಡನಾಡಿನ ಜನತೆಗೆ ನೂತನ ಸರ್ಕಾರದ ಕೊಡುಗೆಯಾಗಿದೆ. ನಮ್ಮ ಪ್ರಮಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ಈಡೇರಿಸುತ್ತೇವೆ ಎಂದು ತಿಳಿಸಿದರು.
ನಂತರ ರಾಹುಲ್ ಗಾಂಧಿ ಮಾತನಾಡಿ, ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ನಮನಗಳು. ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಬಹುಮತ ನೀಡಿದ್ದೀರಿ. ಕಳೆದ ಐದು ವರ್ಷಗಳಲ್ಲಿ ಎದುರಾದ ಸಮಸ್ಯೆಗಳನ್ನು ನಾವು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಷ್ಟು ದೊಡ್ಡ ಗೆಲುವು ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆ ನೋಡಿದ್ದೀರಿ. ಅನೇಕರು ಅನೇಕ ಬಗೆಯ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಗೆಲವು ಸಿಗಲು ಕಾರಣ ಎಂದರೆ ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ರೈತರು, ಕಾರ್ಮಿಕರು, ಶೋಷಿತರು, ದಲಿತರ ಬೆನ್ನಿಗೆ ನಿಂತಿರುವುದು ಎಂದರು.
ನಮ್ಮ ಬಳಿ ಸತ್ಯ ಹಾಗೂ ಬಡ ಜನರಿದ್ದರು. ಬಿಜೆಪಿ ಬಳಿ ಹಣ, ಅಧಿಕಾರ, ಪೊಲೀಸ್ ಅಧಿಕಾರಿಗಳು ಎಲ್ಲವೂ ಇತ್ತು. ಅವರ ಈ ಎಲ್ಲಾ ಶಕ್ತಿಗಳನ್ನು ಕರ್ನಾಟಕದ ಜನ ಮಣಿಸಿದ್ದಾರೆ. ಜನ ಅವರ ಭ್ರಷ್ಟಾಚಾರ, ದ್ವೇಷವನ್ನು ಮಣಿಸಿದ್ದೀರಾ. ಈ ಚುನಾವಣೆಯಲ್ಲಿ ರಾಜ್ಯದ ಜನ ದ್ವೇಷವನ್ನು ಒಡೆದೋಡಿಸಿ ಪ್ರೀತಿ ಸಾಮರಸ್ಯಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಕರ್ನಾಟಕದ ಜನ ಪ್ರೀತಿ ಸಾಮರಸ್ಯದ ಅಂಗಡಿ ತೆರೆದಿದ್ದಾರೆ. ಕಳೆದ ಐದು ವರ್ಷಗಳಿಂದ ನೀವು ಭ್ರಷ್ಟಾಚಾರ ನೋಡಿದ್ದೀರಿ ಎಂದು ಹೇಳಿದರು.
ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಪ್ರತಿ ತಿಂಗಳು ಉಚಿತ, ಯುವನಿಧಿ ಮೂಲಕ ಪದವೀಧರ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ. ನಂತರ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಸಂಚಾರ ವ್ಯವಸ್ಥೆ.
ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನುಡಿದಂತೆ ನಡೆಯುತ್ತೇವೆ. ಮುಂದಿನ ಕೆಲವೇ ಗಂಟೆಗಳಲ್ಲಿ ರಾಜ್ಯದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಐದೂ ಗ್ಯಾರಂಟಿ ಯೋಜನೆಗಳು ಕಾನೂನು ರೂಪಪಡೆದು ಜಾರಿಗೆ ಬರಲಿದೆ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಸರ್ಕಾರದ ಆದ್ಯತೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವಕರ ಹಿತ ಕಾಪಾಡಿ ಅವರ ಭವಿಷ್ಯ ಭದ್ರಗೊಳಿಸುವುದಾಗಿದೆ.
ನಾವು ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ಸರ್ಕಾರ ನೀಡುತ್ತೇವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರೀತಿ ಹಾಗೂ ಶಕ್ತಿ ನೀಡಿರುವ ರಾಜ್ಯದ ಎಲ್ಲಾ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಈ ಸರ್ಕಾರ ರಾಜ್ಯದ ಜನರ ಸರ್ಕಾರ, ನಿಮ್ಮ ಸರ್ಕಾರ. ಈ ಸರ್ಕಾರ ಮನಃಪೂರ್ವಕವಾಗಿ ನಿಮಗಾಗಿ ದುಡಿಯುತ್ತದೆ ಎಂದರು.