ಕಳೆದ ಬಾಲ್ಯ, ಕಲಿತ ಶಾಲೆ, ವಿದ್ಯೆ ನೀಡಿದ ಗುರುಗಳು, ಆಟ-ಪಾಠಗಳಲ್ಲಿ ಒಂದಾಗಿದ್ದ ಸಹಪಾಠಿಗಳ ಸುಮಧುರ ನೆನಪುಗಳ ಸಮಾಗಮ ಎಂತಹವರಿಗೂ ಖುಷಿ ನೀಡುತ್ತದೆ.
ಅಂತಹ ಒಂದು ಸುಮಧುರ ಘಳಿಗೆಗೆ ತಾಲೂಕಿನ ಮಾರುತಿ ಪ್ರೌಢ ಶಾಲೆ ಸಾಕ್ಷಿಯಾಯಿತು. 1997-2000 ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನೆ ಕಾರ್ಯಕ್ರಮ ಜರುಗಿತು. ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲಕು ಹಾಕುತ್ತಾ, ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಿದ್ದು ಅವಿಸ್ಮರಣೀಯ ಕ್ಷಣಗಳಲ್ಲೊಂದಾಗಿತ್ತು, ಕಲಿಸಿದ ಗುರುಗಳಲ್ಲಿ ಸಾರ್ಥಕತೆಯ ಭಾವ ಮನೆ ಮಾಡಿದರೆ ವಿದ್ಯಾರ್ಥಿಗಳ ಕಣ್ಣಲ್ಲಿ ಕೃತಜ್ಞತಾ ಭಾವ ಕಂಗೊಳಿಸಿತು.
ಹಳೆ ವಿದ್ಯಾರ್ಥಿ ರಮೇಶ್ ಆರ್ ಸಿ ಮಾತನಾಡಿ, ವಿದ್ಯಾರ್ಥಿ ಜೀವನವೆಂಬುದು ಬೆಲೆ ಕಟ್ಟಲಾಗದ್ದು, ಪ್ರತಿ ವ್ಯಕ್ತಿಯ ಜೀವನದಲ್ಲಿ ಗುರುವಿನ ಪಾತ್ರ ಅಪಾರವಾಗಿರುತ್ತದೆ, ಅದಕ್ಕಾಗಿಯೇ ವಿದ್ಯಾರ್ಥಿ ಹಂತದ ಜೀವನ ಬಂಗಾರದ ಜೀವನ ಎಂದು ಕರೆಯಲ್ಪಡಲಾಗುತ್ತದೆ ಎಂದರು.
ಶಾಲಾ ಕಾರ್ಯದರ್ಶಿ ಮುರಳಿ ಮೋಹನ್ ಮಾತನಾಡಿ, ಶಿಕ್ಷಣ ಪಡೆದ ಶಾಲೆ ಹಾಗೂ ಶಿಕ್ಷಣ ನೀಡಿದ ಗುರುವಿಗೆ ಬೆಲೆಕೊಟ್ಟ ನಿಮ್ಮ ಔದಾರ್ಯ ಇತರರಿಗೆ ಪ್ರೇರಣಾದಾಯಕ ಎಂದು ಹೇಳಿದರು.
ಕಾಂತರಾಜು, ನಾಗೇಶ್, ಹೇಮರಾಜ್, ಕೋಮಲ, ಪ್ರತಿಭಾ, ರಾಜೇಶ್ವರಿ, ವೆಂಕಟೇಶ್, ನಿವೃತ್ತ ಶಿಕ್ಷಕರಾದ ವೆಂಕಟ ರಾಮನ ಗುಪ್ತ, ಅಧಿ ಶೇಷಪ್ಪ, ಎನ್ ಮುನಿರಾಜು, ಸಿ ಕೃಷ್ಣಪ್ಪ, ಮುಖ್ಯ ಶಿಕ್ಷಕ ವೈ ವಿ ಕೃಷ್ಣ ಮೂರ್ತಿ, ಕೆ ವೆಂಕಟ ರಾಮನ ಇನ್ನು ಮುಂತಾದವರು ಭಾಗವಹಿಸಿದ್ದರು,