ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 236 ತಾಲ್ಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ನಂತರ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ತೀವ್ರ ಬರಪೀಡಿತ ಪಟ್ಟಿಯಲ್ಲಿದೆ.
161 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೂ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
2023ನೇ ಸಾಲಿನ ನೈಋತ್ಯ ಮುಂಗಾರು ರಾಜ್ಯಕ್ಕೆ ಜೂನ್ 8ರಂದು ಪ್ರವೇಶಿಸಿ, ರಾಜ್ಯದ ಎಲ್ಲೆಡೆ 14 ದಿನಗಳಲ್ಲಿ ವ್ಯಾಪಿಸಿತು. ಮುಂಗಾರು ಪ್ರವೇಶ ಮತ್ತು ವ್ಯಾಪಿಸಲು ಸಾಮಾನ್ಯ ದಿನಾಂಕಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ಮಾಹೆಯಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.56% ಮಳೆ ಕೊರತೆ ಉಂಟಾಯಿತು, ಜುಲೈ ಮಾಹೆಯಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29% ಹೆಚ್ಚು ಮಳೆಯಾಗಿದ್ದು, ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ.73ರಷ್ಟು ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿರುವುದು ಕಂಡು ಬಂದಿರುತ್ತದೆ.
ರಾಜ್ಯದ ಮಳೆ, ಬೆಳೆ ಜಲಾಶಯಗಳ ಸಂಗ್ರಹಣಾ ಅಂತರ್ಜಲ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ಕಾಲಕಾಲಕ್ಕೆ ರಾಜ್ಯ ಹವಮಾನ ಅವಲೋಕನಾ ಸಮಿತಿಯು ಪರಿಶೀಲಿಸಿದೆ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿರವರು ಅವಲೋಕಿಸಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.