18ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಅವರು ಆಯ್ಕೆಯಾಗಿದ್ದಾರೆ. ಕೇರಳದ ಐಎನ್‌ಡಿಐಎ ಮೈತ್ರಿಕೂಟದ ಕಾಂಗ್ರೆಸ್‌ನ ಹಿರಿಯ ಸಂಸದ ಮಾವೇಲಿಕರ ಕೋಡಿಕುನ್ನಿಲ್ ಸುರೇಶ್ ಅವರನ್ನು ಸೋಲಿಸಿ ಸ್ಪೀಕರ್ ಆಗಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಉಪಸಭಾಪತಿ ಸ್ಥಾನವನ್ನು ನೀಡಲು ನಿರಾಕರಿಸುವ ಮೂಲಕ ವಿರೋಧ ಪಕ್ಷಗಳ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ 48 ವರ್ಷಗಳ ನಂತರ ಲೋಕಸಭಾಧ್ಯಕ್ಷ ಸ್ಥಾನಕ್ಕೆ ಇಂದು ಸ್ಪರ್ಧೆ ನಡೆಯಿತು. ಹಂಗಾಮಿ ಸ್ಪೀಕರ್ ಅವರು ಧ್ವನಿ ಮತದ ಮೂಲಕ ಸಂಸದರ ಮತಗಳನ್ನು ಅಂಗೀಕರಿಸಿದರು.
ಓಂ ಬಿರ್ಲಾ ಅವರು ಎನ್ ಡಿಎ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿಗೆ ಲೋಕಸಭಾಧ್ಯಕ್ಷರಾಗುತ್ತಿದ್ದು, ಅವರನ್ನು ಸ್ಪೀಕರ್ ಕುರ್ಚಿ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕರೆದುಕೊಂಡು ಬಂದು ಗೌರವಿಸಿ ಅಭಿನಂದಿಸಿದರು.
ಕೋಚಿಂಗ್ ಫ್ಟಾಕ್ಟರಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದ ಕೋಟಾ ಕ್ಷೇತ್ರದಿಂದ ಸಂಸದರಾಗಿರುವ 61 ವರ್ಷದ ಓಂ ಬಿರ್ಲಾ ಅವರು ಮೂರನೇ ತಲೆಮಾರಿನ ಆರ್‌ಎಸ್‌ಎಸ್ ಕುಟುಂಬದಿಂದ ಬಂದವರು. ಅದಕ್ಕೂ ಮುನ್ನ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಶಾಸಕರಾಗಿದ್ದರು.