ಗೌರಿಬಿದನೂರು : ಇ-ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಂದ 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಇಲ್ಲಿನ ನಗರಸಭೆ ಕಂದಾಯ ಅಧಿಕಾರಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರಸಭೆಯ ಕಂದಾಯ ಅಧಿಕಾರಿ ನಾರಾಯಣ್ ಹಾಗೂ ಬಿಲ್ ಕಲೆಕ್ಟರ್ ಎಂದು ಹೇಳಿಕೊಂಡಿದ್ದ ಕೃಷ್ಣಮೂರ್ತಿ ಲೋಕಾಯುಕ್ತರ ಬಲೆಗೆ ಬಿದ್ದವರು.
ವೇದಲವೇಣಿ ಗ್ರಾಮ ನಗರಸಭೆ ವ್ಯಾಪ್ತಿಗೆ ಸೇರಿದ್ದು, ವೇದಲವೇಣಿ ಗ್ರಾಮ ವ್ಯಾಪ್ತಿಯಲ್ಲಿರುವ ತಮ್ಮ ತಾಯಿ ಹಾಗೂ ಸಹೋದರಿಯರ ಜಮೀನಿಗೆ ಇ-ಖಾತೆ ಮಾಡಿಕೊಂಡುವಂತೆ ನಗರದ ಹೊರವಲಯದ ಸಿರಗುಪ್ಪ ಸಕ್ಕರೆ ಕಾರ್ಖಾನೆ ಬಳಿಯ ವಾಸಿ ಜುಲ್ಫಿಕರ್ ಎಂಬುವರು ನಗರಸಭೆಗೆ ಮನವಿ ಸಲ್ಲಿಸಿದ್ದರು.
ಒಟ್ಟು 6 ಖಾತೆಗಳನ್ನು ಮಾಡಿಕೊಂಡುವಂತೆ ಅರ್ಜಿ ಸಲ್ಲಿಸಿದ್ದರು. 6 ಖಾತೆ ಮಾಡಿಕೊಡಲು ಪ್ರತಿ ಖಾತೆಗೆ ತಲಾ 10 ಸಾವಿರದಂತೆ 60 ಸಾವಿರ ರೂ. ಲಂಚ ನೀಡುವಂತೆ ನಗರಸಭೆ ಕಂದಾಯ ಅಧಿಕಾರಿ ನಾರಾಯಣ್ ಬೇಡಿಕೆ ಇಟ್ಟಿದ್ದರು. ತಾನು ಬಿಲ್ ಕಲೆಕ್ಟರ್ ಎಂದು ಹೇಳಿಕೊಳ್ಳುವ ವಾಟರ್ ಮನ್ ಕೃಷ್ಣಮೂರ್ತಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಅಂತಿಮವಾಗಿ 50 ಸಾವಿರಕ್ಕೆ ಒಪ್ಪಿಕೊಳ್ಳಲಾಗಿತ್ತು.
ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಅರ್ಜಿದಾರ ಜುಲ್ಫಿಕರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಮೊದಲೇ ರೂಪಿಸಿದ್ದ ಯೋಜನೆಯಂತೆ 15 ಸಾವಿರ ರೂ. ಮುಂಗಡ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಾರಾಯಣ್ ಹಾಗೂ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಾಯುಕ್ತ ಎಸ್.ಪಿ ಆಂಥೋನಿ ದಾಸ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತು.