ಹುಲಿಯೊಂದು ನೀರಿನಿಂದ ಪ್ಲಾಸ್ಟಿಕ್ ಬಾಟಲಿಯನ್ನು ಬಾಯಲ್ಲಿ ಕಚ್ಚಿ ಹೋಗುತ್ತಿರುವ ದೃಶ್ಯ ಮಾನವ ಕುಲ ನಾಚುವಂತೆ ಮಾಡಿದೆ.
ಆ ವಿಡಿಯೋ ತುಣುಕನ್ನ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ಈ ದೃಶ್ಯ ಫುಲ್ ವೈರಲ್ ಆಗಿದೆ. ಹುಲಿಯ ವರ್ತನೆಯಿಂದ ಮನುಷ್ಯ ಸಾಕಷ್ಟು ಕಲಿಯಬೇಕಿದೆ. ಈಗಲಾದರೂ ಪರಿಸರ ಬಗ್ಗೆ ಮನುಷ್ಯ ಕಾಳಜಿ ವಹಿಸಬೇಕಿದೆ.
ಪಂಚಭೂತಗಳಲ್ಲಿ ಅತೀ ಶ್ರೇಷ್ಠವಾದದ್ದು ಪ್ರಕೃತಿ. ಜಗತ್ತಿನಲ್ಲಿರುವ ಎಲ್ಲಾ ಜೀವ ಸಂಕುಲಕ್ಕೆ ಪ್ರಕೃತಿ ಕೊಟ್ಟಿರುವ ಕೊಡುಗೆ ಅಪಾರ. ಮನುಷ್ಯನಿಗೆ ಅಥವಾ ಜೀವಿಗಳಿಗೆ ಬದುಕಲು ಬೇಕಾದ ಎಲ್ಲವನ್ನೂ ಪ್ರಕೃತಿ ನೀಡಿದೆ. ಆದರೆ ಮನುಷ್ಯ ತನ್ನ ಅತಿಯಾದ ಆಸೆ, ಐಷಾರಾಮಿ ಬದುಕಿಗಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿಕೊಂಡೇ ಬಂದಿದ್ದಾನೆ. ಶುದ್ಧಗಾಳಿ, ಶುದ್ಧ ನೀರು, ಹಸುರಿನಿಂದ ಕಂಗೊಳಿಸುತ್ತಿದ್ದ ಪ್ರದೇಶಗಳಲ್ಲಿ ಹಸಿರೇ ಕಾಣಿಸದೇ ಇರುವಷ್ಟರ ಮಟ್ಟಿಗೆ ಪ್ರಕೃತಿಯ ಆಪೋಶನವಾಗಿದೆ.
ಪ್ರಕೃತಿಯ ವಿರುದ್ಧ ಮನುಷ್ಯರು ಹೋಗುತ್ತಿರುವ ರೀತಿ ಇಂದು ಪ್ರಾಕೃತಿಕ ವಿಕೋಪದ ಮೂಲಕ ಆತನನ್ನೇ ಬಲಿ ಪಡೆದುಕೊಳ್ಳುತ್ತಿದೆ. ತಾನೇ ತೋಡಿಕೊಂಡ ಹಳ್ಳಕ್ಕೆ ಬೀಳುವಂತಾಗಿದೆ ಮನುಷ್ಯನ ಪರಿಸ್ಥಿತಿ ನಿರ್ಮಾಣವಾಗಿದೆ.
ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ‘ಪ್ಲಾಸ್ಟಿಕ್ ’ ಮಾಡುತ್ತಿರುವ ಅನಾಹುತ ಅಂತಿಂಥದ್ದಲ್ಲ. ಪರಿಸರ ಮಾತ್ರವಲ್ಲ ಮನುಷ್ಯರು, ಪ್ರಾಣಿಗಳ ಮೇಲೂ ಪ್ಲಾಸ್ಟಿಕ್ ದುಷ್ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.
ಇತ್ತೀಚಿನ ದಿನಗಳಲ್ಲಿ ಮನುಷ್ಯನನ್ನು ಬಲಿತೆಗೆದುಕೊಳ್ಳುತ್ತಿರುವ ಮಾರಕ ಕಾಯಿಲೆ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ಲಾಸ್ಟಿಕ್ ನಲ್ಲಿರುವ ವಿಷಕಾರಿ ಅಂಶವೇ ಕಾರಣ ಅನ್ನುವ ಆಘಾತಕಾರಿ ಮಾಹಿತಿಯನ್ನು ಸಂಶೋಧಕರೇ ಬಿಚ್ಚಿಟ್ಟಿದ್ದಾರೆ. ಇನ್ನು ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸುವ ಕೆಲಸ ನಡೆದರೂ ನಾವು ಮಾತ್ರ ಹೋಟೆಲ್ ಗಳಿಂದ ಆಹಾರವನ್ನು ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತರುವುದನ್ನು ನಿಲ್ಲಿಸಿಲ್ಲ. ಇದೇ ಕಾರಣದಿಂದ ಪ್ಲಾಸ್ಟಿಕ್ ನಲ್ಲಿರುವ ಹಾನಿಕಾರಣ ಅಂಶಗಳು ನಾವು ತಿನ್ನುವ ಆಹಾರವನ್ನು ಸೇರಿಕೊಂಡು ನಾನಾ ತರದ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿದೆ.
ಇನ್ನು ಮನುಷ್ಯನ ಜೊತೆಗೆ ಅದೆಷ್ಟೋ ಪ್ರಾಣಿಗಳು, ಜಲಚರಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ಪ್ರಾಣ ಕಳೆದುಕೊಂಡಿವೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ವಸ್ತುವಾಗಿರಬಹುದು, ಸಮುದ್ರದ ಒಡಲು ಸೇರುವ ಪ್ಲಾಸ್ಟಿಕ್ ತ್ಯಾಜ್ಯವಾಗಿರಬಹುದು ಅಲ್ಲಿನ ಜೀವಿಗಳ ಹೊಟ್ಟೆ ಸೇರಿ ಅವುಗಳನ್ನೇ ಬಲಿಪಡೆಯುತ್ತಿವೆ.
ಪ್ಲಾಸ್ಟಿಕ್ ನಿಂದ ಇಷ್ಟೆಲ್ಲಾ ತೊಂದರೆಗಳಿವೆ ಎಂದು ತಿಳಿದಿದ್ದರೂ , ಬಳಕೆಗೆ ಸುಲಭವಾಗಿದೆ ಅನ್ನುವ ಕಾರಣಕ್ಕೆ ಪ್ಲಾಸ್ಟಿಕನ್ನು ನೆಚ್ಚಿಕೊಂಡಿರುವವರು ಹಲವರು. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವಂತೆ ಸರ್ಕಾರಗಳು, ಸಂಘ ಸಂಸ್ಥೆಗಳು ಮನವಿ ಮಾಡಿದರೂ ಅದನ್ನು ಉಪಯೋಗಿಸುವ ನಾವುಗಳು ಅದರ ಬಳಕೆಯನ್ನು ಕಡಿಮೆ ಮಾಡದಿದ್ದಲ್ಲಿ ಇನ್ನಷ್ಟು ಅನಾಹುತಗಳನ್ನು ನಾವೇ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.
ನಮಗಾಗಿ ಇಷ್ಟೆಲ್ಲಾ ಕೊಟ್ಟಿರುವ ಪ್ರಕೃತಿಯ ಉಳಿವಿಗೆ ನಮ್ಮಿಂದ ಸಣ್ಣ ಕೊಡಗೆಯನ್ನಾದರೂ ನೀಡೋಣ. ಈ ಮೂಲಕ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಲು ಪಣ ತೊಡೋಣ. ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನಕ್ಕೆ ಕೈ ಜೋಡಿಸೋಣ.