ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ಲಾಭದಾಯಕವಲ್ಲ ಎಂದು ಅನೇಕ ರೈತರು ಬೇಸಾಯ ಕೈ ಬಿಟ್ಟು ನಗರ ಪ್ರದೇಶಗಳಿಗೆ ಕೂಲಿ ಕೆಲಸಕ್ಕೆ ಗುಳೆ ಹೋಗುತ್ತಿದ್ದು, ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಠ ಅನುಭವಿಸುತ್ತಿರುವ ಅನೇಕ ರೈತರನ್ನು ಇಂದು ನೋಡಬಹುದು.
ಆದರೆ ಒಬ್ಬ ರೈತ ಶೂನ್ಯ ಬಂಡವಾಳದಲ್ಲಿ ಪ್ರತಿ ತಿಂಗಳು 8ರಿಂದ 10 ಸಾವಿರ ಆದಾಯ ಪಡೆಯುವ ಮೂಲಕ ಇತರೆ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಕುರುವುಗೆರೆ ಗ್ರಾಮದ ಕೆ.ಬಿ ಮುನೆಗೌಡ ಅವರು ತಮ್ಮ 10 ಗುಂಟೆ ಜಾಗದಲ್ಲಿ ಸಮಗ್ರ ಕೃಷಿ ಕೈ ತೋಟ ಮಾಡಿ, ಅದರಿಂದ ಆದಾಯ ಪಡೆಯುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಚರಂಡಿ ನೀರಿನ ಬಳಕೆ
ತಮ್ಮ ಜಮೀನಿನ ಪಕ್ಕದ ಚರಂಡಿ ತ್ಯಾಜ್ಯ ನೀರಿಗೆ ಆಪ್‌ಎಚ್ ಪಿ ಮೋಟರ್ ಅಳವಡಿಸಿ ತಮ್ಮ 10 ಗುಂಟೆ ಜಾಗಕ್ಕೆ ನೀರಿನ ಸೌಕರ್ಯ ಕಲ್ಪಿಸಿಕೊಂಡಿದ್ದಾರೆ.
ನಳ ನಳಿಸುತ್ತಿದೆ ಕಾಕಡ, ಕನಕಾಂಬರ
ಕಾಕಡ 60 ಗುಣಿ, ಕನಕಾಂಬರ, 15 ಗುಣಿ, ಮಲ್ಲಿಗೆ, ಸುಕಂದರಾಜ ಹೋವಿನ ಗಿಡ ನೆಟ್ಟಿದ್ದಾರೆ. ಪ್ರತಿ ತಿಂಗಳು ಹೂವಿನಿಂದ 8 ರಿಂದ 10 ಸಾವಿರ ಆದಾಯ ಗಳಿಸುತ್ತಿದ್ದಾರೆ. ವರ್ಷದಲ್ಲಿ 10 ತಿಂಗಳು ನಿರಂತರವಾಗಿ ಹೂ ಕೊಯಿಲು ಮಾಡಿ ಸಮೀಪದ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.
ಸಾವಯವ ತರಕಾರಿ ಸೋಪ್ಪು
ಸೀಮೆ ಬದನೆ ಕಾಯಿ, ಚಪ್ಪರದ ಬದನೆ ಕಾಯಿ, ಬಳ್ಳಿಆಲೂಗೆಡ್ಡಿ ಬೆಳೆದಿರುವುದು ವಿಶೇಷವಾಗಿದೆ. ಮುಳ್ಳಿನ ಬದನೆಕಾಯಿಗೆ ಕಸಿ ಮಾಡುವ ಮೂಲಕ ಪ್ರತಿ ದಿನ 2 ರಿಂದ ಮೂರು ಕೆ.ಜಿ ವಿಭಿನ್ನ ಬದನೆ ಕಾಯಿ ಬೆಳೆಯುತ್ತಿದ್ದಾರೆ.
ಗಿಡಗಳ ಮದ್ಯದಲ್ಲಿ ಪಾಲಕ್, ದಂಟು, ಕೊತ್ತಂಬರಿ,, ಪುದೀನ, ಸೋಪ್ಪು ತರಕಾರಿಗಳನ್ನು ವರ್ಷ ಪೂರ್ತಿ ಮನೆಗೆ ಬಳಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ.
ವಿವಿಧ ಬಗೆಯ ಹಣ್ಣಿನ ಗಿಡಗಳು
ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ನೆಲ್ಲಿಕಾಯಿ, ಬೆಟ್ಟದನೆಲ್ಲಿಗಿಡ, ಚಕೋತಾ, ನಿಂಬೆ, ಎಳ್ಳಿಕಾಯಿ, ಪಪ್ಪಾಯಿ, ಬಟರ್ ಪ್ರೂಟ್ಸ್, ಡ್ರ್ಯಾಗನ್ ಪ್ರೂಟ್ಸ್, ಬಳ್ಳಿ ಗೆಣಸು, ಕಬ್ಬು, ಮರಗೆಣಸು, ಸುವರ್ಣ ಗೆಡ್ಡೆ, ಬಾಳೆ ಗಿಡ, ಸೀಬೆ ಗೀಡ, ಮಾವು, ಹಲಸು, ಹಾಗೂ ಆಪಲ್ ಗಿಡಗಳು ತೋಟದಲ್ಲಿ ಬಹಳ ಸಮೃಧ್ದಿಯಾಗಿ ಬೆಳೆಸಿದ್ದಾರೆ. ಈಗಾಗಲೇ ಚಕೋತಾ ಸೇರಿದಂತೆ ಅನೇಕ ಗಿಡಗಳು ಹಣ್ಣು ಬಿಡಲು ಆರಂಭಿಸಿವೆ.
ಹೈನುಗಾರಿಕೆಯಲ್ಲಿ ಅಭಿವೃದ್ಧಿ
ಎರಡು ಗುಂಟೆ ಹಾಗೂ ಇತರೆ ಖಾಲಿ ಜಾಗದಲ್ಲಿ ಸೀಮೆ ಹುಲ್ಲು ಬೆಳೆದಿದ್ದಾರೆ. 4 ಸೀಮೆ ಹಸುಗಳಿಗೆ ಸಾಕಾಗುವಷ್ಟು ಮೇವನ್ನು ತಮ್ಮ ತೋಟದಲ್ಲಿ ಬೆಳೆದುಕೊಂಡಿದ್ದಾರೆ. ಇದರಿಂದ ಅವರು ಪ್ರತಿ ತಿಂಗಳು 10 ರಿಂದ 12 ಸಾವಿರ ಹಾಲಿನಿಂದ ಲಾಭ ಗಳಿಸುತ್ತಿದ್ದಾರೆ.
10 ಗುಂಟೆ ಜಾಗದ ಸುತ್ತಲು 20 ಸಿಲ್ವರ್ ಮರ, 20 ತೇಗದ ಮರ, 8 ಹಲಸಿನ ಮರ, 1 ಮೆಹಂದಿ ಗಿಡ 40 ಹಗಸೆ ಗಿಡಗಳು ಬೆಳೆದಿದ್ದಾರೆ. 5 ಮೇಕೆ ಗಳನ್ನು ಸಾಕಿದ್ದು ಅದಕ್ಕೆ ಬೇಕಾದ ಮೇವನ್ನು ಹಗಸೆ ಗಿಡಗಳ ಮೂಲಕ ಪೂರೈಸುತ್ತಿದ್ದಾರೆ.
ಕೋಳಿ ಸಾಗಾಣಿಕೆ
ಕೋಳಿ ಸಾಕಲು ತಾವೇ ವಿಬ್ಬಿನ್ನ ರೀತಿಯಲ್ಲಿ ಗುಡಿಸಲು ನಿರ್ಮಿಸಿ ಅದರಲ್ಲಿ 200 ನಾಟಿ ಕೋಳಿಗಳನ್ನು ಸಾಕಿದ್ದಾರೆ ಇದರಿಂದ ಪ್ರತಿ ವರ್ಷ 20 ರಿಂದ 30 ಸಾವಿರ ತನಕ ಆದಾಯ ಪಡೆಯುತ್ತಿದ್ದಾರೆ.
ಒಟ್ಟಾರೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಬರಿ ಸಗಣಿ ಗೊಬ್ಬರ ಬಳಕೆ ಮಾಡುವ ಮೂಲಕ ತಮ್ಮ ಕೈತೋಟವನ್ನು ಸಂಪೂರ್ಣ ಸಾವಯುವ ತೋಟ ಮಾಡಿದ್ದು, 10 ಗುಂಟೆ ಬರಡು ಭೂಮಿಯಲ್ಲಿ ಚರಂಡಿ ತ್ಯಾಜ್ಯ ನೀರನ್ನು ಬಳಸಿಕೊಂಡು ಸಣ್ಣ ಪ್ರಮಾಣದಲ್ಲಿ ಶೂನ್ಯ ಬಂಡವಾಳದಲ್ಲಿ ಸಮಗ್ರ ಕೃಷಿ ಮಾಡಿ ತಮ್ಮ ಬದುಕು ಕಟ್ಟಿಕೊಂಡಿರುವ ಮುನೇಗೌಡರ ಕಾರ್ಯ ನಿಜಕ್ಕೂ ಇತರೆ ರೈತರಿಗೆ ಮಾದರಿ ಎನ್ನಬಹುದು.
ಇವರು ಸರ್ಕಾರ ಯಾವುದೇ ರೀತಿಯ ಸೌಲಭ್ಯ ಸಹಾಯ ಮಾಹಿತಿ ಪಡೆಯದೆ ಎಲೆ ಮರೆ ಕಾಯಿಯಂತೆ ಇರುವ ಇಂತಹ ಸಣ್ಣ ರೈತರ ಸಾಧನೆ ಗುರುತಿಸಿ ಪ್ರೇರೇಪಿಸುವ ಕೆಲಸ ನಮ್ಮ ಕೃಷಿ ಇಲಾಖೆಯ ಅಧಿಕಾರಿಗಳು ಮಾಡಬೇಕಾಗಿದೆ.