1.37 ಕೋಟಿ ಮೌಲ್ಯದ ಮಾದಕ ವಸ್ತುಗಳ ವಶ

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳ ಅಕ್ರಮ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಬಗ್ಗೆ ಮಾಹಿತಿ ನೀಡಿದರು. ದಾಳಿಯ ವೇಳೆ 975 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ಗಳು, 407 ಗ್ರಾಂ ಕೊಕೈನ್, ಎರಡು ಇಲೆಕ್ಟ್ರಾನಿಕ್ ತೂಕದ ಮಾಪಕ ಯಂತ್ರಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ₹1.37 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಹೇಳಿದರು.

ಗಿರಿನಗರ ಪೊಲೀಸ್ ಠಾಣೆಯು ಇತ್ತೀಚಿನ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ತನಿಖೆಯಲ್ಲಿರುವ ಈ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಒಟ್ಟಾರೆಯಾಗಿ ₹24.15 ಲಕ್ಷ ಮೌಲ್ಯದ 310 ಗ್ರಾಂ ಚಿನ್ನಾಭರಣಗಳು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ. ನಗರದಾದ್ಯಂತ ದಾಖಲಾಗಿರುವ ಇಂತಹ 8 ಪ್ರಕರಣಗಳಿಗೆ ಈ ವಸ್ತುಗಳು ಸಂಬಂಧಿಸಿವೆ ಎಂದು ಹೇಳಿದರು.

ಪೀಣ್ಯ ಪೊಲೀಸರು ಎರಡು ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 05 ಆರೋಪಿಗಳನ್ನು ಬಂಧಿಸಿದ್ದು, 325 ಗ್ರಾಂ ಚಿನ್ನಾಭರಣ, 1.8 ಕೆಜಿ ಬೆಳ್ಳಿ ವಸ್ತುಗಳು, ಒಂದು ಗಡಿಯಾರ, ಒಂದು ಲ್ಯಾಪ್‌ಟಾಪ್ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹21 ಲಕ್ಷ ಆಗಿದೆ ಎಂದು ತಿಳಿಸಿದರು.

ಮೈಕೋ ಲೇಔಟ್ ಪೊಲೀಸ್ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ₹11,60,000 ಮೌಲ್ಯದ 29 ಕಳವು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 17 ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಕಳ್ಳತನಗಳು ನಡೆದಿವೆ. ವಶಕ್ಕೆ ಪಡೆದಿರುವ ಇನ್ನೂ 12 ದ್ವಿಚಕ್ರ ವಾಹನಗಳ ನಿಜ ವಾರಸುದಾರರನ್ನ ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ ಎಂದರು.

ಬೆಳ್ಳಂದೂರು ಪೊಲೀಸ್ ಠಾಣೆಯವರು ಹಲವಾರು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ಕಳ್ಳತನಗಳಿಗೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ₹10 ಲಕ್ಷ ಮೌಲ್ಯದ 16 ಲ್ಯಾಪ್‌ಟಾಪ್‌ಗಳು, 1 ಐಪ್ಯಾಡ್ ಮತ್ತು 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಂಧನದಿಂದ ಬೆಳ್ಳಂದೂರು ಮತ್ತು ಬಂಡೇಪಾಳ್ಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 2 ಲ್ಯಾಪ್‌ಟಾಪ್ ಕಳ್ಳತನದ ಪ್ರಕರಣಗಳು ಪತ್ತೆಯಾಗಿವೆ. ಉಳಿದ 12 ಲ್ಯಾಪ್‌ಟಾಪ್‌ಗಳು ಮತ್ತು 4 ಮೊಬೈಲ್ ಫೋನ್‌ಗಳ ನೈಜ ಮಾಲೀಕರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

Leave a Reply

Your email address will not be published. Required fields are marked *