
ಮುಂಡಗೋಡ: ಅಕ್ರಮವಾಗಿ ಮಾದಕ ವಸ್ತುವಾದ ಚರಸ್ ಅನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಮುಂಡಗೋಡ ಪಟ್ಟಣದ ಸುಭಾಷನಗರ ನಿವಾಸಿ ಸಚೀನ ಟೆಕ್‌ಬಹದ್ದೂರ ಗೋರ್ಖಾ ಬಂಧಿತ ಆರೋಪಿ.
ಆರೋಪಿ ಸಚೀನನು ಯಾವುದೇ ಅಧಿಕೃತ ಪಾಸ್ ಅಥವಾ ಪರವಾನಗಿ ಇಲ್ಲದೇ, ಲಾಭ ಗಳಿಸುವ ಉದ್ದೇಶದಿಂದ ಚರಸ್ ಅನ್ನು ಮಾರಾಟ ಮಾಡಲು ಹಿರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಸಾಗಿಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಟ್ಟಣದ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ-69 ರ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಡಿಪೋ ಹತ್ತಿರ ಆರೋಪಿಯನ್ನು ತಡೆದು ಪರಿಶೀಲಿಸಿದ್ದಾರೆ.
ಈ ವೇಳೆ ಆರೋಪಿಯ ಬಳಿ ಸುಮಾರು 781 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಚರಸ್ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ₹8,00,000 (ಎಂಟು ಲಕ್ಷ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಪೊಲೀಸರು ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಜಪ್ತಿ ಮಾಡಿದ್ದಾರೆ.
ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಪಿ.ಎಸ್.ಐ ಯಲ್ಲಾಲಿಂಗ ಕುನ್ನುರ, ಸಿಬ್ಬಂದಿಗಳಾದ ಕೋಟೇಶ ನಾಗರೊಳ್ಳಿ, ಮಹಾಂತೇಶ ಕುಂದೋಳ, ಅಣ್ಣಪ್ಪ ಬಡಿಗೇರ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ, ಗುರು ಬಿಶಟ್ಟಪ್ಪನವರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಏನಿದು ಚರಸ್?
’ಚರಸ್’ (Charas) ಎಂಬುದು ಗಾಂಜಾ ಗಿಡದ ಹೂವು ಮತ್ತು ಎಲೆಗಳಿಂದ ತೆಗೆಯಲಾದ ಒಂದು ಬಗೆಯ ಅಂಟು (ರಾಳ). ಕಪ್ಪು ಅಥವಾ ಕಂದು ಬಣ್ಣದಲ್ಲಿರುವ ಇದು ಗಾಂಜಾಕ್ಕಿಂತ ಹೆಚ್ಚು ನಶೆ ನೀಡುವ ತೀಕ್ಷ್ಣ ಮಾದಕ ವಸ್ತು. ಇದು ನೇರವಾಗಿ ಮನುಷ್ಯನ ಮೆದುಳು ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಅತ್ಯಂತ ಅಪಾಯಕಾರಿಯಾಗಿದೆ. ಭಾರತದಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಚರಸ್ ಸಾಗಾಟ, ಸಂಗ್ರಹಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ.