ಹೊಸ ಸಂವತ್ಸರದ‌ ವಾರ್ಷಿಕ ಭವಿಷ್ಯ…

ನಿಮ್ಮ ವಾರ್ಷಿಕ ಭವಿಷ್ಯ……

ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ……..

ಇಂದು ಮಾರ್ಚ್ 30, 2025/2026 ರವರೆಗೆ ಇಂದಿನ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ…

ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾಷೆ ಎಲ್ಲವೂ ಮೀರಿ ಅನ್ವಯವಾಗುತ್ತದೆ…

ಮಾಧ್ಯಮಗಳಲ್ಲಿ ಅದರಲ್ಲೂ ಟೆಲಿವಿಷನ್ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಶಿಯ ಜನರು ಮುಖ್ಯವಾಗಿ ತುಂಬಾ ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯ ಹೆಣ್ಣು ಮಕ್ಕಳು ತೀವ್ರ ಕುತೂಹಲದಿಂದ ತಮ್ಮ ತಮ್ಮ ವಾರ್ಷಿಕ ಭವಿಷ್ಯವನ್ನು ಕೇಳುತ್ತಾರೆ…

ಒಂದಷ್ಟು ಜನ ಉತ್ತಮ ಅದೃಷ್ಟದ ಭವಿಷ್ಯ ಎಂದು ಸಮಾಧಾನ ಪಟ್ಟುಕೊಂಡರೆ, ಮತ್ತೊಂದಿಷ್ಟು ಜನಕ್ಕೆ ದುರಾದೃಷ್ಟ ಮತ್ತು ಕಷ್ಟದ ಕಾಲ ಎಂದು ನಿರಾಸೆಯು, ಆತಂಕವೂ ಮೂಡುತ್ತದೆ…

ಇರಲಿ, ಈಗ ಇಲ್ಲಿ ಮತ್ತೊಂದು ವಾರ್ಷಿಕ ಭವಿಷ್ಯ…

ಈ ವರ್ಷ ಬಹುತೇಕ ಎಲ್ಲಾ ಮದ್ಯಮ, ಕೆಳಮಧ್ಯಮ ಮತ್ತು ಬಡವರಿಗೆ ಬೆಲೆ ಏರಿಕೆ ಬಿಸಿ ತಟ್ಟುವುದು ನಿಶ್ಚಿತ. ಅದಕ್ಕೆ ಮಾನಸಿಕವಾಗಿ ಸಿದ್ದರಾಗಿ. ಖರ್ಚು ಕಡಿಮೆ ಮಾಡಿಕೊಳ್ಳುವ ಮತ್ತು ಆದಾಯ ಹೆಚ್ಚು ಮಾಡಿಕೊಳ್ಳುವ ಪ್ರಯತ್ನವೂ, ಬಂದದ್ದನ್ನು ಅನುಭವಿಸುವ ಸಮಚಿತ್ತದ ಮನಸ್ಥಿತಿಯ ಅವಶ್ಯಕತೆ ಇದೆ. ಆಗ ಬೆಲೆ ಏರಿಕೆಯ ಬಿಸಿ ಅಷ್ಟಾಗಿ ತಟ್ಟುವುದಿಲ್ಲ. ಇದು ಒಂದು ರೀತಿಯ ಪರಿಹಾರವೂ ಹೌದು…

ಈ ವರ್ಷ ಕುಟುಂಬದಲ್ಲಿ ಹಿರಿಕಿರಿಯರೆನ್ನದೆ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು ಅಥವಾ ಶಸ್ತ್ರಚಿಕಿತ್ಸೆಯೂ ಆಗಬಹುದು ಅಥವಾ ಸಾವು ಸಂಭವಿಸಲೂಬಹುದು. ಅದಕ್ಕೆ ಸಾಕಷ್ಟು ಹಣ ಸಮಯ ಖರ್ಚಾಗಬಹುದು, ಮಾನಸಿಕ ಕ್ಷೋಭೆಯು ಉಂಟಾಗಬಹುದು. ಇದಕ್ಕೆ ನಿರ್ದಿಷ್ಟ ಪರಿಹಾರವೇನು ಇಲ್ಲ. ಅನಾರೋಗ್ಯವೆಂಬುದು ಪ್ರಕೃತಿಯ ಸಹಜ ಗುಣಲಕ್ಷಣ ಮತ್ತು ಸ್ವಾಭಾವಿಕ ಪ್ರಕ್ರಿಯೆ. ನಾವು ಸ್ವತಃ ನಿರ್ಲಕ್ಷ್ಯ, ದುರಾಸೆ, ಆಹಾರದ ಮೇಲಿನ ಅತಿಯಾದ ಮೋಹ, ಮನಸ್ಸಿನ ನಿಯಂತ್ರಣವಿಲ್ಲದೆ ಆಹ್ವಾನಿಸಿಕೊಳ್ಳುವ ಕೆಲವು ಸ್ವಯಂಕೃತ ಅಪರಾಧದಿಂದ ಆಗುವ ಖಾಯಿಲೆಗಳನ್ನು ಆದಷ್ಟು ನಿಯಂತ್ರಿಸಿಕೊಂಡು, ನಮ್ಮ ಕೈಯಲ್ಲಿ ಇಲ್ಲದ ಕೆಲವು ಅನಿರೀಕ್ಷಿತ ಖಾಯಿಲೆಗಳಿಗೆ ಅದರ ಅನಿವಾರ್ಯತೆಯನ್ನು ಒಪ್ಪಿಕೊಂಡು, ಸಹಜವಾಗಿ ಪ್ರತಿಕ್ರಿಯಿಸುತ್ತ ಜೀವಿಸಬೇಕಷ್ಟೆ…

ಕುಟುಂಬಗಳಲ್ಲಿ ಸಾಮಾನ್ಯವಾಗಿ ಕೌಟುಂಬಿಕ ಕಲಹಗಳು ಭುಗಿಲೇಳಬಹುದು.
ಹಣಕಾಸು, ಆಸ್ತಿ, ನಿರುದ್ಯೋಗ, ಪ್ರೇಮ ವಿವಾಹ ಮುಂತಾದ ಕಾರಣಗಳಿಂದ ಮನೆಯ ನೆಮ್ಮದಿ ಹಾಳಾಗಬಹುದು. ಇದಕ್ಕೆ ಮುನ್ನೆಚ್ಚರಿಕೆಯ ಅವಶ್ಯಕತೆ ಇಲ್ಲ. ಬದಲಾಗಿ ಮನಸ್ಸಿನಲ್ಲಿ ಒಂದಷ್ಟು ವಿಶಾಲ ಮನೋಭಾವ, ಸರಳತೆ, ವಾಸ್ತವವನ್ನು ಒಪ್ಪಿಕೊಳ್ಳುವ ಎದೆಗಾರಿಕೆ, ದೊಡ್ಡ ಮನಸ್ಸು ಇದ್ದರೆ ಸಾಕು. ಕಷ್ಟಗಳು ಬಂದರೂ ಅದರ ತೀವ್ರತೆಯನ್ನ ಕಡಿಮೆ ಮಾಡಿಕೊಳ್ಳಬಹುದು…

ಭಾರತದ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಅಧಿಕ ಸಾವು ನೋವುಗಳು ಉಂಟಾಗಬಹುದು. ದೂರದ ಎಲ್ಲೋ ನಡೆಯುವ ಘಟನೆಗಳು, ಟಿವಿ ಪತ್ರಿಕೆಗಳಲ್ಲಿ ಓದುವ ಘಟನೆಗಳು, ನಮ್ಮ ಸುತ್ತಮುತ್ತ ಅಥವಾ ನಮ್ಮ ಮನೆಯಲ್ಲಿಯೇ ಸಂಭವಿಸಬಹುದು. ಈ ಆಘಾತ ಅಪಘಾತ ತಡೆಯಲು ವಾಹನ ಖರೀದಿಸುವವರು, ವಾಹನ ಚಲಾಯಿಸುವವರು ಸಾಕಷ್ಟು ತಾಳ್ಮೆಯಿಂದ, ಈಗಿನ ಸಮಾಜದ ವೇಗದ ಭ್ರಮೆಗೆ ಸಿಲುಕದೆ ನಿಧಾನವಾಗಿ ವಾಹನ ಚಲಾಯಿಸುತ್ತಾ, ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ, ಟ್ರಾಫಿಕ್ ಕಿರಿಕಿರಿಯಲ್ಲೂ ಮನಸ್ಸನ್ನು ಚಂಚಲಗೊಳಿಸಿಕೊಳ್ಳದೆ ತಾಳ್ಮೆಯಿಂದ ಕಾಯುತ್ತಾ, ರಸ್ತೆ ತಿರುವುಗಳಲ್ಲಿ ಸ್ವಲ್ಪ ನಿಧಾನವಾಗಿ ಎಚ್ಚರಿಕೆಯಿಂದ ಚಲಾಯಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿ, ಕನಿಷ್ಠ ನಿಮ್ಮ ಜೀವ ಉಳಿಯಬಹುದು…

ಇಂದಿನ ಅಪನಂಬಿಕೆಯ, ಆತಂಕಕಾರಿ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆರ್ಥಿಕ ವಿಷಯದಲ್ಲಿಯೇ ಆಗಲಿ, ಆಸ್ತಿ ವಿಷಯಗಳಲ್ಲಿಯೇ ಆಗಲಿ ಯಾರಿಗಾದರೂ ಜಾಮೀನು ಆಗುವ ಮೊದಲು ಸಾಕಷ್ಟು ಯೋಚಿಸಿ. ಏಕೆಂದರೆ ಜಾಮೀನು ಹಾಕಿ ತೊಂದರೆಗೆ ಸಿಕ್ಕಿಹಾಕಿಕೊಂಡವರ ಸಂಖ್ಯೆ ತೀರಾ ಹೆಚ್ಚಾಗುತ್ತಿದೆ. ಅದರಲ್ಲಿ ನೀವು ಒಬ್ಬರಾಗಬೇಡಿ. ಹಾಗೆಂದು ಸಂಬಂಧಗಳನ್ನು ಕೆಡಿಸಿಕೊಳ್ಳುವುದು ಬೇಡ. ನಮ್ಮ ನಮ್ಮ ಮಿತಿಯನ್ನು, ಸಂಬಂಧದ ಮಹತ್ವವನ್ನು ಅರ್ಥ ಮಾಡಿಕೊಂಡು ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡೋಣ. ಅಕಸ್ಮಾತ್ ಅದರಿಂದ ತೊಂದರೆಯಾದರೆ ಅಷ್ಟೇ ಅಭಿಮಾನದಿಂದ ಅನುಭವಿಸೋಣ. ಏಕೆಂದರೆ ಪರೋಪಕಾರಂ ಇದಮಿತ್ತಮ್ ಶರೀರಂ…..

ಕೊಲೆಗಳು, ಕಳ್ಳತನಗಳು ವಿಚ್ಛೇದನಗಳು, ಅತ್ಯಾಚಾರಗಳು ಖಂಡಿತವಾಗಲೂ ಹೆಚ್ಚಾಗುವುದು ನಿಶ್ಚಿತ. ಅದರಲ್ಲೂ ಸೈಬರ್ ಅಪರಾಧಗಳು ತುಂಬಾ ವ್ಯಾಪಕವಾಗಿ ಹರಡಬಹುದು. ಈ ಎಲ್ಲವೂ ಈ ಸಮಾಜದ, ಈ ವ್ಯವಸ್ಥೆಯ ಭಾಗವಾಗಿರುವುದರಿಂದ ಇದರಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾಮಾನ್ಯ ಜ್ಞಾನ ಉಪಯೋಗಿಸಿ ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದ ಜೀವನ ಮಾಡಬೇಕಾಗುತ್ತದೆ. ದುರ್ಘಟನೆ ಸಂಭವಿಸಿದಾಗ ಅದನ್ನು ಸಹಜವಾಗಿಯೇ ಅನುಭವಿಸಬೇಕು. ಇದಕ್ಕೆ ನಿರ್ದಿಷ್ಟ ಪರಿಹಾರವೇನು ಇಲ್ಲ…

ಎಂದಿನಂತೆ ಪ್ರಾಕೃತಿಕ ವಿಕೋಪಗಳಾದ ಬಿಸಿಗಾಳಿ, ಶೀತಗಾಳಿ, ಪ್ರವಾಹ, ಭೂಕಂಪ, ಮೇಘಸ್ಕೋಟ, ಕಾಳ್ಗಿಚ್ಚು, ಸಾಂಕ್ರಾಮಿಕ ರೋಗಗಳು ಯಾವ ಕ್ಷಣದಲ್ಲಿ ಬೇಕಾದರೂ ಸಂಭವಿಸಬಹುದು. ಇದರ ಮೇಲೆ ಸಾಮಾನ್ಯರಾದ ನಮ್ಮ ನಿಯಂತ್ರಣ ಇಲ್ಲದೇ ಇರುವುದರಿಂದ ಅದು ಬಂದಾಗ ಅದಕ್ಕೆ ಪ್ರತಿಕ್ರಿಯಿಸುತ್ತ ಬದುಕು ಸಾಗಿಸುವುದಷ್ಟೇ ನಾವು ಮಾಡಬಹುದಾದ ಕರ್ತವ್ಯ…

ಸ್ಥಳೀಯವಾಗಿ ನಿಮ್ಮ ಮನೆಯ ಸುತ್ತಮುತ್ತ, ಅಕ್ಕಪಕ್ಕದಲ್ಲಿ ಸಾವು ಸಂಭವಿಸುವ ಎಲ್ಲಾ ಸಾಧ್ಯತೆಯೂ ಇದೆ. ನಿಮ್ಮ ಕುಟುಂಬದಲ್ಲಿ ಮದುವೆ, ಆರೋಗ್ಯ, ಉದ್ಯೋಗ, ಶಿಕ್ಷಣ ಈ ರೀತಿಯ ವಿಷಯಗಳಲ್ಲಿ ಒಂದಷ್ಟು ಖರ್ಚುಗಳು ಹೆಚ್ಚಾಗಬಹುದು. ಅದಕ್ಕಾಗಿ ಮಾನಸಿಕವಾಗಿ ಸಿದ್ದರಾಗಬೇಕಾಗಿದೆ. ಹೆಚ್ಚು ಸಾಲ ಮಾಡಿಕೊಳ್ಳದೆ ಇರುವಂತೆ ಎಚ್ಚರಿಕೆ ವಹಿಸಬೇಕು. ಇದು ಬಹುತೇಕ ನಮ್ಮ ನಿಯಂತ್ರಣದಲ್ಲೇ ಇರುತ್ತದೆ…

ಇನ್ನು ರಾಜಕೀಯ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಭಾರಿ ಭಾರಿ ಬದಲಾವಣೆಗಳು ಖಂಡಿತ ಸಂಭವಿಸುತ್ತದೆ. ಅಧಿಕಾರದಾಹದ ಇಂದಿನ ದಿನಗಳಲ್ಲಿ ಸರ್ಕಾರಗಳು ಉರುಳಬಹುದು, ಪಕ್ಷಗಳು ಬದಲಾಗಬಹುದು, ಜನಪ್ರತಿನಿಧಿಗಳ ಕುದುರೆ ವ್ಯಾಪಾರ ನಡೆಯಬಹುದು. ಯಾರು ಬೇಕಾದರೂ ಅಧಿಕಾರ ಕಳೆದುಕೊಳ್ಳಬಹುದು. ಇನ್ಯಾರಾದರು ಹೊಸಬರು ಅಧಿಕಾರಕ್ಕೆ ಬರಬಹುದು .ಒಟ್ಟಿನಲ್ಲಿ ಭಾರತದ ರಾಜಕೀಯ ನಿರಂತರ ಚಲನೆಯಿಂದ ಕೂಡಿರುತ್ತದೆ. ಆದರೆ ಅದರ ದಿಕ್ಕು ಮಾತ್ರ ಅತ್ಯಂತ ಭ್ರಷ್ಟ, ದುಷ್ಟ ಮಾರ್ಗದಲ್ಲಿ ಸಾಗುತ್ತಿರುತ್ತದೆ. ಇದಕ್ಕೆ ಸದ್ಯದಲ್ಲಿ ಯಾವುದೇ ಪರಿಹಾರವಿಲ್ಲ. ಜನ ಎಚ್ಚೆತ್ತುಕೊಳ್ಳಬೇಕು ಎಂಬ ಒಂದೇ ಮಾತಿನ ಭರವಸೆ ಮಾತ್ರ ಉಳಿದಿದೆ…

ಭಾರತದ ಮಹಾನ್ ಸಾಧಕರು, ಜನಪ್ರಿಯ ವ್ಯಕ್ತಿಗಳು, ಪ್ರಖ್ಯಾತರು, ಕುಖ್ಯಾತರು ಈ ವರ್ಷ ದೇಹ ತ್ಯಾಗ ಮಾಡುವ ಸಾಧ್ಯತೆ ಇದೆ. ಅಂದರೆ ಸಾಯಬಹುದು. ಸಾಂಕೇತಿಕವಾಗಿ ಹೇಳಬೇಕೆಂದರೆ ದೊಡ್ಡ ಮರವೊಂದು ಬೀಳಬಹುದು. ಇದು ಸಾಮಾನ್ಯರಿಗೆ ಯಾವುದೇ ರೀತಿಯಲ್ಲೂ ಅನ್ವಯಿಸುವುದಿಲ್ಲ…

ಭಾರತದಲ್ಲಿ ಆತಂಕ ಪಡುವಷ್ಟು ಒಂದೆರಡು ದೊಡ್ಡ ಭಯೋತ್ಪಾದಕ ಕೃತ್ಯಗಳು ನಡೆಯುವ ಎಲ್ಲ ಸಾಧ್ಯತೆಯೂ ಇದೆ…

ಅಂತರಾಷ್ಟ್ರೀಯವಾಗಿ ಘರ್ಷಣೆಗಳು, ಉದ್ವೇಗಗಳು, ಯುದ್ಧದ ರೀತಿಯ ಹೋರಾಟಗಳು ಸಾಕಷ್ಟು ನಡೆಯುವುದು ನಿಶ್ಚಿತ. ಸೋಲು ಗೆಲುವುಗಳಿಗಿಂತ ಅಪಾರ ಸಂಖ್ಯೆಯ ಜನ ಸಾಯುತ್ತಾರೆ. ಆರ್ಥಿಕ ಅಧಿಪತ್ಯಕ್ಕಾಗಿ ಆರ್ಥಿಕ ಭಯೋತ್ಪಾದನೆ, ಹುಚ್ಚು ತೀರ್ಮಾನಗಳು, ಹಠಮಾರಿ ಧೋರಣೆಗಳು ವಿಶ್ವದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿ ಒಂದಷ್ಟು ಸಮಸ್ಯೆ ಉಂಟಾಗಬಹುದು…

ಈ ರೀತಿಯ ವಾರ್ಷಿಕ ಭವಿಷ್ಯ ಹೇಳಲು ದೀರ್ಘವಾದ ಅಧ್ಯಯನ, ಚಿಂತನೆ, ಅನುಭವ, ಜ್ಞಾನ, ಭಕ್ತಿ, ಸಂಸ್ಕೃತ ಭಾಷೆ, ವಿಭೂತಿ ರುದ್ರಾಕ್ಷಿ, ಕುಂಕುಮ, ಕವಡೆ, ಸಾಕಿದ ಗಿಣಿ ಬೇಕಾಗುವುದಿಲ್ಲ. ದಿನನಿತ್ಯದ ಆಗುಹೋಗುಗಳನ್ನು ಗಮನಿಸುತ್ತಿದ್ದರೆ ಸಾಮಾನ್ಯ ಜ್ಞಾನವನ್ನೇ ಉಪಯೋಗಿಸಿಕೊಂಡು ಹೇಳಬಹುದು ಮತ್ತು ಸ್ವಯಂ ಅರಿತುಕೊಳ್ಳಬಹುದು. ಅನಾವಶ್ಯಕವಾಗಿ ಪರಿಹಾರ ಸಿಗುತ್ತದೆ ಎಂದು ನಾನಾ ರೂಪದ ಕೆಲವು ಮೌಢ್ಯಗಳನ್ನು ನಂಬಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಹಣ ಕಳೆದುಕೊಳ್ಳಬೇಡಿ….

ನಿಮ್ಮ ಆತ್ಮವಿಶ್ವಾಸ, ನಿಮ್ಮ ಶಕ್ತಿ, ನಿಮ್ಮ ಸಾಮರ್ಥ್ಯ, ನಿಮ್ಮ ದೌರ್ಬಲ್ಯ, ನೀವು ಹುಟ್ಟಿದ ಸ್ಥಳ, ಹುಟ್ಟಿದ ಜಾತಿ, ಧರ್ಮ, ಭಾಷೆ, ಹುಟ್ಟಿದ ತಂದೆ, ತಾಯಿಯ ಮಾನಸಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ, ನೀವು ವಾಸಿಸುತ್ತಿರುವ ಪ್ರದೇಶದ ಆಡಳಿತದ ಗುಣಮಟ್ಟ, ಜನರ ಮಾನಸಿಕ ಸ್ಥಿತಿ, ನೀವು ಸಮಾಜವನ್ನು ಅರಿತುಕೊಂಡ ರೀತಿ, ಸಮಾಜ ನಿಮಗೆ ಪ್ರತಿಕ್ರಿಯಿಸುವ ರೀತಿ, ನಿಮ್ಮ ಜ್ಞಾನದ ಮಟ್ಟ ಈ ಎಲ್ಲವೂ ಮನಸ್ಸಿನಲ್ಲಿ ವಿಮರ್ಶೆ ಮಾಡಿಕೊಂಡು ಬದುಕಬೇಕು. ಕೆಲವೊಮ್ಮೆ ಅಪರೂಪಕ್ಕೆ ಪಡೆದ ಸಾಮರ್ಥ್ಯದಿಂದ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಅದು ತೀರಾ ಕೆಲವರಿಗೆ ಮಾತ್ರ ಸಾಧ್ಯ. ಇನ್ನೆಲ್ಲರೂ ಈ ಸಮಾಜದ ಈ ಮಾಯಾ ಜಾಲದೊಳಗೆ ಜೀವಿಸಬೇಕು. ಅದನ್ನು ತಪ್ಪಿಸಿಕೊಳ್ಳವುದು ತುಂಬಾ ಕಷ್ಟ…….

ಇದೇ ಜೀವನ, ಇದೇ ಭವಿಷ್ಯ,
ನನ್ನದು, ನಿಮ್ಮದು, ಎಲ್ಲರದೂ…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *