ಹೊಸ ವರ್ಷಾಚರಣೆಗೆ ಕ್ಷಣಗಣನೆ- ನ್ಯೂ ಇಯರ್ ಸೆಲೆಬ್ರೇಷನ್ ಗೆ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರಿಗೆ ನಿರ್ಬಂಧ

ಹೊಸ ವರ್ಷದ ಸ್ವಾಗತಕ್ಕೆ ಇಡೀ ರಾಜ್ಯವೇ ಸಜ್ಜಾಗುತ್ತಿದೆ. ಇತ್ತ ಹೊಸ ವರ್ಷದ ಆಚರಣೆ ನೆಪದಲ್ಲಿ ನಡೆಯುವ ಮೋಜು-ಮಸ್ತಿ, ಅನಾಹುತ ತಪ್ಪಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ದಕ್ಷಿಣ ಭಾರತದ ಬೇಸಿಗೆ ಗಿರಿಧಾಮ, ಬಡವರ ಊಟಿ ಎಂದೇ ಖ್ಯಾತಿ ಪಡೆದ ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಈ ಬಾರಿಯೂ ಪ್ರವೇಶ ನಿಷೇಧಿಸಿರುವುದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಪೊಲೀಸ್‌‍ ಇಲಾಖೆಯು ಹೊಸ ವರ್ಷದ ಹಿಂದಿನ ದಿನ ಅಂದರೆ ಡಿ.31ರಂದು ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೊಸ ವರ್ಷದ ಹಿನ್ನಲೆ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಂದಿ ಗಿರಿಧಾಮಕ್ಕೆ ಮುಂಗಡವಾಗಿ ಅತಿಥಿ ಕೊಠಡಿಗಳನ್ನು ಕಾಯ್ದಿರಿಸಿರುವ ಪ್ರವಾಸಿಗರನ್ನು ಹೊರತುಪಡಿಸಿ ಡಿಸೆಂಬರ್ 31 ರ ಮಧ್ಯಾಹ್ನ 2 ಗಂಟೆಯಿಂದ 2026ರ ಜನವರಿ 1 ರ ಮಧ್ಯಾಹ್ನ 2 ಗಂಟೆಯರವರೆಗೆ ಸಾರ್ವಜನಿಕರ, ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆದೇಶ ಹೊರಡಿಸಿದ್ದಾರೆ.

ಡಿ.31 ಮಧ್ಯಾಹ್ನದಿಂದ ಜ.1 ಮಧ್ಯಾಹ್ನ 2ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿದ್ದು, ಪಾನಮತ್ತರಾಗಿ ವಾಹನ ಚಾಲನೆ ಮಾಡುವುದು ಮತ್ತು ಬೆಟ್ಟದ ಕಡಿದಾದ ರಸ್ತೆಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ಈ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!