ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ “ಮುಕ್ತ ಗ್ರಂಥಾಲಯ” ಕ್ಕೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಚಾಲನೆ

ಪೊಲೀಸ್ ಠಾಣೆಯಲ್ಲಿ ಸಾಮಾನ್ಯವಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ದೂರುದಾರರು, ಆರೋಪಿಗಳು, ಅಪರಾಧಿಗಳು, ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧನಗಳು, ಆರೋಪಿಗಳ ಕೊಠಡಿಗಳು, ಗನ್, ಬಂದೂಕು ಸೇರಿದಂತೆ ಇತರೆ ವಸ್ತುಗಳು ಇರುವುದನ್ನು ನಾವು ಗಮನಿಸಿದ್ದೇವೆ. ಆದರೆ ಇಲ್ಲೊಂದು ಠಾಣೆಯಲ್ಲಿ ಇವೆಲ್ಲದಕ್ಕಿಂತ ಮಿಗಿಲಾಗಿ ಗ್ರಂಥಾಲಯವೂ ಕೂಡ ಇದೆ. ಅದು ಎಲ್ಲಿ ಅಂತೀರಾ.. ಇಲ್ಲಿದೆ ಮಾಹಿತಿ ಓದಿ…

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ “ಮುಕ್ತ ಗ್ರಂಥಾಲಯ” ಎಂಬ ವಿಶೇಷ ಕಾರ್ಯಕ್ರಮವನ್ನು ಠಾಣಾ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಉದ್ಘಾಟನೆಗೊಳಿಸಿದ್ದಾರೆ.

ಆರಂಭಿಕವಾಗಿ ವಿವಿಧ ಸಾಹಿತ್ಯ, ಸಂಸ್ಕೃತಿ, ಕಲೆ, ವೈದ್ಯಕೀಯ, ರಾಜಕೀಯ, ಮೇರು ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳು ಒಳಗೊಂಡಂತೆ ಸುಮಾರು 100 ಪುಸ್ತಕಗಳ ಗ್ರಂಥಾಲಯದಲ್ಲಿದ್ದು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸಹಾ ಇದರ ಉಪಯೋಗ ಪಡೆಯಬಹುದು ಎಂದು ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಹೇಳಿದ್ದಾರೆ.

ಪುಸ್ತಕ ಓದಲು ಸೂಕ್ತ ಆಸನ ವ್ಯವಸ್ಥೆ, ನೆರಳು ಮತ್ತು ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇದೊಂದು ವಿನೂತನ ಯೋಜನೆ ಮತ್ತು ಯೋಚನೆಯಾಗಿದ್ದು, ಓದುಗರಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಸದುದ್ದೇಶದಿಂದ ನಿರ್ಮಿಸಲಾಗಿದೆ ಎಂದರು.

ಈಗಾಗಲೇ ಹೊಸಹಳ್ಳಿ ಠಾಣೆಯನ್ನು ಮಾದರಿ, ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿಸಲು ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಅವಿರತವಾಗಿ ಪ್ರಯತ್ನ ಪಡೆಯುತ್ತಲೇ ಇದ್ದಾರೆ.

ರಾವ್ ಗಣೇಶ್ ಜನಾರ್ಧನ್ ಅವರು ಹೊಸಹಳ್ಳಿ ಪೊಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಆಗಿ ಬಂದಾಗಿನಿಂದಲೂ ಠಾಣೆಗೆ ಹೊಸ ರೂಪ ಕೊಡಲು ಮುಂದಾಗುತ್ತಿದ್ದಾರೆ. ಮೊದಲು ಠಾಣಾ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಹುಳ-ಹುಪ್ಪಟೆ, ಹಾವುಗಳ ತಾಣವಾಗಿತ್ತು. ಇದೀಗ ಠಾಣಾ ಸುತ್ತಮುತ್ತ ಇರುವ ಗಿಡಗಂಟಿಗಳನ್ನು ತೆರವುಗೊಳಿಸಿ ಹೂ, ಹಣ್ಣು ನೆರಳು ಕೊಡುವ ಸಸಿಗಳನ್ನು ನೆಟ್ಟು, ಸಸಿಗಳಿಗೆ ನಿತ್ಯ ನೀರು ಸರಬರಾಜುಗಾಗಿ ಈಗಾಗಲೇ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಜೊತೆಗೆ ಸ್ಪ್ರಿಂಕ್ಲರ್ ಕೂಡ ಅಳವಡಿಸುವ ಮೂಲಕ ಪರಿಸರ ಸ್ನೇಹಿ ಠಾಣೆಯನ್ನಾಗಿಸಿದ್ದಾರೆ.

ಒಳಿತು, ನ್ಯಾಯ, ಶಾಂತಿ, ಶುಭ್ರತೆ, ಮಂಗಳದ ಸಂಕೇತವೇ ಬುದ್ಧ. ಈ‌‌ ಬುದ್ಧನ ಪ್ರತಿಮೆಯನ್ನು ಠಾಣಾ ಆವರಣದಲ್ಲಿ ಪ್ರತಿಷ್ಟಾಪಿಸಿ ಠಾಣೆಗೆ ಬಂದವರಿಗೆ ನ್ಯಾಯ, ಶಾಂತಿ, ಒಳಿತನ್ನು ನೀಡಲು ಪ್ರಯತ್ನಿಸಲಾಗುವುದು ಎಂಬುದನ್ನು ಪರೋಕ್ಷವಾಗಿ ಸಂದೇಶ ನೀಡಲಾಗಿದೆ.

ಠಾಣೆಯ ಕಾಂಪೌಂಡ್ (ಗೋಡೆ) ಮೇಲೆ ಪೊಲೀಸ್ ವ್ಯವಸ್ಥೆ ಬಗೆಗಿನ ಚಿತ್ರಗಳನ್ನು ಪೇಂಟಿಂಗ್ ಮಾಡಿಸಲಾಗಿದೆ. ನೆರಳಲ್ಲಿ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಠಾಣೆಯನ್ನಾಗಿ ಮಾರ್ಪಾಡಿಸಿದ್ದಾರೆ.

ಈ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಪತ್ತೆಹಚ್ಚುವ ಸಲುವಾಗಿ ಠಾಣಾ ವ್ಯಾಪ್ತಿಯ ವಿವಿಧ ಕೂಡು ರಸ್ತೆ, ಪ್ರಮುಖ ವೃತ್ತಗಳು, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳ ಕೆಲವು ಸೂಕ್ಷ್ಮ‌, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ಸುಮಾರು 23 ಸೋಲಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಠಾಣಾ ವ್ಯಾಪ್ತಿಯ ದೊಡ್ಡಹಳ್ಳ ರಸ್ತೆ, ಇತರೆ‌ ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ಕಾರಣದಿಂದ ಮಣ್ಣು ಕೊಚ್ಚಿ ಹೋಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದ್ದರಿಂದ ರಸ್ತೆಯ ಬದಿಯ ಗುಂಡಿಗಳಿಗೆ ಮಣ್ಣು ತುಂಬಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ಹೊಸಹಳ್ಳಿ-ದೊಡ್ಡಬಳ್ಳಾಪುರ ರಸ್ತೆಯ ಘಾಟ್ ಪ್ರದೇಶದಲ್ಲಿ ಇತ್ತೀಚೆಗೆ ಅಪಘಾತಗಳು ಸಂಭವಿಸುತ್ತಿದ್ದು, ಅಂತಹ ಅಪಘಾತಗಳನ್ನು ತಡೆಯುವ ಸಲುವಾಗಿ ರಾತ್ರಿವೇಳೆ  ಸಂಚರಿಸುವ ವಾಹನಗಳ ಚಾಲಕರಿಗೆ ಗೋಚರಿಸುವಂತೆ ರಸ್ತೆಯ ತಿರುವುಗಳಲ್ಲಿ ರಿಫ್ಲೆಕ್ಟರ್ ಗಳನ್ನು ಅಳವಡಿಸಿದ್ದಾರೆ.

ಒಟ್ಟಿನಲ್ಲಿ, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಅವರು ಜನರಿಗೆ ನ್ಯಾಯ ಒದಗಿಸಿಕೊಡುವುದಲ್ಲದೇ ತಾನು ಕೆಲಸ ಮಾಡುವ ಠಾಣೆಯನ್ನೂ ಅಭಿವೃದ್ಧಿಪಡಿಸುವಲ್ಲೂ ಮುಂದೆ ಇದ್ದಾರೆ. ಜನ ಸ್ನೇಹಿ, ಪರಿಸರ ಸ್ನೇಹಿ, ಸಿಬ್ಬಂದಿ ಸ್ನೇಹಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2 thoughts on “ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ “ಮುಕ್ತ ಗ್ರಂಥಾಲಯ” ಕ್ಕೆ ಇನ್ಸ್ ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ಚಾಲನೆ

  1. We all Love you sir,You are my Hero❤️”ನಿಮ್ಮ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಿಯೇ ಉಳಿಯುತ್ತದೆ.””ನೀಡಿದ ನಿಮ್ಮ ಶ್ರಮವು ಜಗತ್ತನ್ನು ಇತರರಿಗಾಗಿ ಉತ್ತಮಸ್ಥಳವನ್ನಾಗಿ ಮಾಡುವ ಅಪರೂಪದ ಬದ್ಧತೆಯನ್ನು ತೋರಿಸಿದೆ.””ನಿಮ್ಮ ಕೆಲಸವು ಕೇವಲ ಸೇವೆಯಲ್ಲ; ಇದು ಮಾನವತೆಯ ಅತಿ ಉತ್ತಮ ಮಾದರಿಯಾಗಿದೆ.””ನೀವು ಸಾಬೀತುಪಡಿಸಿದ್ದೀರಿ – ಒಬ್ಬ ವ್ಯಕ್ತಿ ಸಮಾಜದಲ್ಲಿ ನಿಜವಾಗಿಯೂ ಬದಲಾವಣೆ ತರಬಹುದು ಎಂದು.””ನಿಮ್ಮ ದಯೆ, ನಾಯಕತ್ವ ಮತ್ತು ದೃಷ್ಟಿಕೋನವು ಅನೇಕ ಜೀವಗಳಿಗೆ ನಂಬಿಕೆ ಮತ್ತು ಶಕ್ತಿ ನೀಡಿದೆ.””ನೀವು ಕರುಣೆಯನ್ನು ಅರ್ಥಪೂರ್ಣ ಕ್ರಿಯೆಯಾಗಿ ಪರಿವರ್ತಿಸಿ, ಸ್ಫೂರ್ತಿದಾಯಕ ವಾಸ್ತವಿಕತೆಯನ್ನು ಉಳಿಸಿದ್ದೀರಿ.””ನಿಮ್ಮ ನಿಸ್ವಾರ್ಥ ಕಾರ್ಯದಿಂದ ಸಮಾಜ ಇನ್ನಷ್ಟು ಶ್ರೀಮಂತ ಮತ್ತು ಪ್ರಕಾಶಮಾನವಾಗಿದೆ.”

  2. ತುಂಬ ಸಂತೋಷದ ವಿಷಯ ಸರ್ ಹೊಸಳ್ಳಿ ಪೊಲೀಸ್ ಠಾಣೆಯನ್ನು ಮಾದರಿ ಪೊಲೀಸ್ ಠಾಣೆಯನ್ನಾಗಿ ಪರಿವರ್ತನೆ ಮಾಡಿರುತ್ತೀರಾ ಮತ್ತು ಸಾರ್ವಜನಿಕರಲ್ಲಿ ಜನ ಸ್ನೇಹಿತ ಪೊಲೀಸ್ ಹಾಗೂ ಜಿಲ್ಲೆಯ ಕೊನೆಯ ಬಾರ್ಡರ್ ನಲ್ಲಿ ಇದ್ದು ತುಂಬಾ ಹೆಚ್ಚುಕಟ್ಟಾಗಿ ಪರಿಸರ ಸ್ನೇಹಿಯಾಗಿ ಮತ್ತು ನೊಂದು ಬಂದವರಿಗೆ ದಣಿವಾರಿಸಿ ಜ್ಞಾನಾರ್ಜನೆಯನ್ನು ತುಂಬಿಕೊಳ್ಳಲು ಸೂಕ್ತವಾದ ಜಾಗವಾಗಿ ಇರುತ್ತದೆ ಸರ್

Leave a Reply

Your email address will not be published. Required fields are marked *

error: Content is protected !!