ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ, ವಿದ್ಯಾರ್ಥಿನಿಲಯಗಳಿಗೆ ಉಪಲೋಕಾಯುಕ್ತರ ಅನಿರೀಕ್ಷಿತ ಭೇಟಿ

ಆಸ್ಪತ್ರೆಗಳು ದೇವಸ್ಥಾನವಿದ್ದಂತೆ, ದೇವಸ್ಥಾನಗಳಲ್ಲಿ ಕಂಡುಬರುವ ಶುಚಿತ್ವ ಆಸ್ಪತ್ರೆಗಳಲ್ಲಿಯೂ ಇರಬೇಕು ಇಲ್ಲದಿದ್ದಲ್ಲಿ ರೋಗಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಉಪ ಲೋಕಾಯುಕ್ತರಾದ ಕೆ ಎನ್ ಫಣೀಂದ್ರ ಹೇಳಿದರು.

ಹೊಸಕೋಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಬಾಲಕರ ವಿದ್ಯಾರ್ಥಿನಿಲಯ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಮೊದಲು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.

ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ಹಾಸಿಗೆ ವ್ಯವಸ್ಥೆ , ಶೌಚಾಲಯ ಶುಚಿತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು.

ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳನ್ನು ವಿಚಾರಿಸಿ ರೋಗಿಗಳ ಜೊತೆ ವೈದ್ಯರ ಒಡನಾಟ, ಚಿಕಿತ್ಸೆ ವಿಧಾನ, ಔಷಧಿಗಳನ್ನು ಸರಿಯಾದ ಸಮಯಕ್ಕೆ ನೀಡುತ್ತಿರುವ ಕುರಿತು, ವೈದ್ಯರು ನಿರಂತರವಾಗಿ ಬರುತ್ತಿರುವ ಬಗ್ಗೆ, ಭಾನುವಾರಗಳಂದು ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರುವ ಕುರಿತು ವಿಚಾರಿಸಿದರು.

ಔಷಧಿ, ಚಿಕಿತ್ಸೆಗಳಿಗೆ ಯಾರಿಂದಲಾದರೂ ಹಣದ ಬೇಡಿಕೆಯಿದೆಯೇ ನಿರ್ಭೀತಿಯಿಂದ ಹೇಳಿ ಎಂದು ರೋಗಿಗಳನ್ನು ಪ್ರಶ್ನಿಸಿದರು.

ಮಹಿಳಾ ವಾರ್ಡ್, ಪುರುಷರ ವಾರ್ಡ್ , ಐಸಿಯು ಘಟಕ, ಡಯಾಲಿಸಿಸ್ ಕೇಂದ್ರ ಔಷಧ ವಿತರಣಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಆಸ್ಪತ್ರೆಯಲ್ಲಿ ಹಾಸಿಗೆ, ಹೊದಿಕೆ ಗಳಲ್ಲಿ ಇನ್ನಷ್ಟು ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಆಸ್ಪತ್ರೆ ಸಿಬ್ಬಂದಿಗೆ ಸೂಚಿಸಿದರು.

ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್ ನಂತಹ ಸೌಲಭ್ಯಗಳು ಇರುವುದಿಲ್ಲ ಈ ಆಸ್ಪತ್ರೆ ಇರುವ ತಾಣವು ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿದ್ದು, ಅಪಘಾತ ವಲಯವೂ ಆಗಿರುವ ಕಾರಣ ಆಸ್ಪತ್ರೆಯನ್ನು ಉನ್ನತ ದರ್ಜೆಗೆ ಏರಿಸುವ ಅವಶ್ಯಕತೆ ಇದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸತೀಶ್ ಕುಮಾರ್ ಉಪ ಲೋಕಾಯುಕ್ತರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಆಸ್ಪತ್ರೆಯನ್ನು ಸ್ಥಳಾಂತರಿಸುವ ಕುರಿತು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದರು.

ನಂತರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರು ಪ್ರತಿನಿತ್ಯ ನೀಡುತ್ತಿರುವ ತಿಂಡಿ, ಊಟ , ಪೌಷ್ಟಿಕಾಹಾರಗಳಾದ ಹಾಲು, ಮೊಟ್ಟೆ, ಬಾಳೆಹಣ್ಣುಗಳನ್ನು ನಿಯಮಿತವಾಗಿ ಕೊಡುತ್ತಿರುವ ಬಗ್ಗೆ, ಸ್ನಾನಕ್ಕೆ ಬಿಸಿನೀರು ಕೊಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿದ್ಯಾರ್ಥಿ ನಿಲಯದ ಅಡುಗೆ ಮನೆ, ಗ್ರಂಥಾಲಯ, ಓದುವ ಕೊಠಡಿಗಳಿಗೆ ಭೇಟಿ ನೀಡಿದರು. ಪುಸ್ತಕಗಳ ಲಭ್ಯತೆ ಬಗ್ಗೆ ವಿಚಾರಿಸಿದರು.

ವಿದ್ಯಾರ್ಥಿ ನಿಲಯದ ಹೊದಿಕೆಗಳಲ್ಲಿ ಶುಭ್ರತೆ ಕಾಪಾಡಿಕೊಳ್ಳಲು ಸೂಚಿಸಿದರು ಸ್ನಾನಕ್ಕೆ ಬಿಸಿನೀರು ಕೊಡದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳಲ್ಲಿ ವಿವರಣೆ ಕೋರಿದರು.

ಆಹಾರ ಧಾನ್ಯಗಳ ನಿರ್ವಹಣಾ ವಹಿ/ನಗದು ವಹಿಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ವಿದ್ಯಾರ್ಥಿ ನಿಲಯದ‌ ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಲಾಯಿತು.

ನಂತರ ಹೊಸಕೋಟೆ ಟೌನ್ ನಲ್ಲಿರುವ ದೇವರಾಜ್ ಅರಸು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಹಾಸ್ಟೆಲ್ ನಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ವಸತಿ, ಊಟ, ಶೌಚಾಲಯ, ಹಾಸಿಗೆ, ಸ್ವಚ್ಛತೆಗಳನ್ನು ಪರಿಶೀಲಿಸಿದರು.

ಮಕ್ಕಳ ಬಳಿ ಹಾಸ್ಟೆಲ್ ನಲ್ಲಿರುವ ಸೌಲಭ್ಯಗಳ ಬಗ್ಗೆ, ಅವಶ್ಯಕತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವು ಸಣ್ಣಪುಟ್ಟ ಲೋಪದೋಷ ಸರಿಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಶಶಿಕಾಂತ್.ಬಿ.ಭಾವಿಕಟ್ಟಿ, ಉಪ ನಿಬಂಧಕರಾದ ಎಂ.ವಿ.ಚನ್ನಕೇಶವರೆಡ್ಡಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ್ ಸಾಲಿಯಾನ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್.ಅನುರಾಧ,ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶ್ರೀನಾಥ್. ಎಂ.ಜೋಶಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *