ಹೊಸಕೋಟೆಯ ರಾಷ್ಟ್ರಿಯ ಹೆದ್ದಾರಿಯ ಕೋಲಾರ ಜಂಕ್ಷನ್ ಹಾಗೂ ಚೆನ್ನೈ -ಬೆಂಗಳೂರು ಹೈವೇಯಲ್ಲಿ ರೋಡ್ ಅಲೈನ್‌ಮೆಂಟ್‌ಗೆ ಸಂಬಂಧಿಸಿದಂತೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರೋಡ್ ಅಲೈನ್‌ಮೆಂಟ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಹಾಗೆಯೇ ಆನೇಕಲ್, ಹೊಸೂರು ಕಡೆಗೆ ರಸ್ತೆ ವಿಸ್ತೀರ್ಣಗೊಳಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಹಳೆಯ ಘನತ್ಯಾಜ್ಯ ನಿರ್ವಹಣಾ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶಶೀಲನೆ ನಡೆಸಿದರು.
ಎಸ್.ಟಿ.ಆರ್.ಆರ್ ಯೋಜನೆ ಸಾಗುವ ಮಾರ್ಗದಲ್ಲಿ ನೂತನ ಟೌನ್ ಶಿಪ್ ಗಳನ್ನು ನಿರ್ಮಿಸುವ ಉದ್ದೇಶ ನಮ್ಮ ಮುಂದಿದ್ದು, ಈ ಹಿನ್ನೆಲೆ ದೊಡ್ಡಬಳ್ಳಾಪುರದ ಬಳಿ ಎರಡು ಸ್ಥಳಗಳಲ್ಲಿ ಜಾಗ ಗುರುತಿಸುವ ಕಾರ್ಯ ನಡೆಸಲಾಯಿತು. ಈ ವೇಳೆ ಉದ್ದೇಶಿತ ಯೋಜನಾ ಪ್ರದೇಶದ ನೀಲನಕ್ಷೆಯನ್ನು ಪರಿಶೀಲಿಸಲಾಯಿತು.
ಹೊಸಕೋಟೆಯಲ್ಲಿ 18500 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಗುಡಿ ಟೌನ್‌ಶಿಪ್ ಯೋಜನೆಯ ಕುರಿತಂತೆ ಇಂದು ಪರಿಶೀಲನೆ ನಡೆಸಿದೆ. ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುವ ಹೊಸ ದಿಕ್ಕಿನತ್ತ ನಾವು ಹೆಜ್ಜೆ ಇಡುತ್ತಿದ್ದೇವೆ. ಸ್ಯಾಟಲೈಟ್ ರಿಂಗ್ ರಸ್ತೆ ಸಾಗುವ ಕಡೆಗೆ ಹೊಸ ಟೌನ್‌ಶಿಪ್‌ಗಳನ್ನು ನಿರ್ಮಿಸಿ ಅಗತ್ಯ ಮೂಲಸೌಕರ್ಯ ಒದಗಿಸುವುದು, ರಸ್ತೆ, ರೈಲು ಮೊದಲಾದ ಸಂಪರ್ಕ ನೀಡುವುದು ನಮ್ಮ ಗುರಿಯಾಗಿದೆ. ಈ ಮೂಲಕ ಬೆಂಗಳೂರನ್ನು ವಿಶ್ವದರ್ಜೆಯ ಅತ್ಯುತ್ತಮ ನಗರವಾಗಿಸುವುದು ನಮ್ಮ ಕನಸು ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ.