ಕೋಲಾರ : ಪಶು ಇಲಾಖೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ ರಾಸುಗಳಿಗೆ ಬಾಧಿಸುತ್ತಿರುವ ರೋಗ ನಿಯಂತ್ರಣಕ್ಕೆ ವಿಶೇಷ ಗ್ರಾಮೀಣ ಪಶು ವೈದ್ಯರ ತಂಡ ನೇಮಕ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕೆಂದು ಅ.5 ರಂದು ಜಾನುವಾರುಗಳ ಸಮೇತ ಬಂಗಾರಪೇಟೆ ಪಶು ಇಲಾಖೆ ಕಚೇರಿ ಮುತ್ತಿಗೆ ಹಾಕಲು ಗುರುವಾರ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರ ಕುಟುಂಬ ನಿರ್ವಹಣೆ ನೀಡುತ್ತಿರುವಂತಹ ಹೈನುಗಾರಿಕೆ ಪಶು ಸಚಿವರ ನಿರ್ಲಕ್ಷ್ಯ ದಿಂದ ದಿನೇದಿನೇ ನಶಿಸಿ ಹೋಗುತ್ತಿದೆ. ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ರೈತರಿಗೆ ಜೀವನಾಧಾರವಾಗಿರುವ ರಾಸುಗಳಿಗೆ ಬಾಧಿಸುತ್ತಿರುವ ಚರ್ಮ ಗಂಟು ರೋಗ ಮತ್ತಿತರ ರೋಗಗಳಿಗೆ ಸಮರ್ಪಕವಾದ ಚಿಕಿತ್ಸೆ ನೀಡಲು ಪಶು ವೈದ್ಯರಿಗೆ ನೂರೊಂದು ಬಾರಿ ಕರೆ ಮಾಡಿದರೂ ಕನಿಷ್ಠ ಗಡಿಭಾಗದಲ್ಲಿರುವ ಪಶು ಆಸ್ಪತ್ರೆಯಲ್ಲಿನ ಸಿಬ್ಬಂದಿ ಸಹ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ರೈತಸಂಘದ ತಾಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ರಾಸುಗಳ ಉಳಿವಿಗಾಗಿ ದುಬಾರಿ ಹಣವನ್ನು ವೆಚ್ಚ ಮಾಡಿ ಖಾಸಗಿ ಪಶು ವೈದ್ಯರನ್ನು ಅವಲಂಭಿಸಬೇಕಾದ ಪರಿಸ್ಥಿತಿ ಇರುವ ಜೊತೆಗೆ ಶ್ರೀಮಂತರ ಮನೆಗಳಲ್ಲಿ ಸಾಕಿರುವ ನಾಯಿಗಳಿಗೆ ಇರುವ ಬೆಲೆ ಬಡ ರೈತರು ಸಾಕಾಣಿಕೆ ಮಾಡಿರುವ ರಾಸುಗಳಿಗೆ ಇಲ್ಲದಂತಾಗಿದೆ. ಶ್ರೀಮಂತರು ಕರೆ ಮಾಡಿದರೆ ತಾಲೂಕಿನ ಪಶು ವೈದ್ಯರು ಎದ್ದುಬಿದ್ದು ಶ್ರೀಮಂತರ ಮನೆಗೆ ಬಂದು ಅವರ ನಾಯಿಗಳಿಗೆ ನಿಯತ್ತಾಗಿ ಚಿಕಿತ್ಸೆ ನೀಡಿ ತಮ್ಮ ಕರ್ತವ್ಯ ಪಾಲನೆ ಮಾಡುವ ಪಶು ವೈದ್ಯರ ವಿರುದ್ಧ ಗಡಿಭಾಗದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಶು ಇಲಾಖೆಯಲ್ಲಿ ಪಶು ಪಾಲಕರಿಗೆ ಸಾಕಷ್ಟು ಯೋಜನೆಗಳಿದ್ದರೂ ಆ ಯೋಜನೆಗಳು ಇಲಾಖೆಯ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಬಡವರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಯಾವುದೇ ಯೋಜನೆಯನ್ನು ಕೇಳಿದರೂ ಅನುದಾನವಿಲ್ಲವೆಂದು ರೈತರನ್ನು ಯಾಮಾರಿಸುವ ಅಧಿಕಾರಿಗಳ ಜೊತೆಗೆ ಇಲಾಖೆಯಲ್ಲಿ ಪಶು ವೈದ್ಯರಿಗಿಂತ ಅಲ್ಲಿನ ಕೆಳಹಂತದ ಸಿಬ್ಬಂದಿಯೇ ಪಶು ವೈದ್ಯರಾಗಿ ತಮ್ಮ ಅಧಿಕಾರವನ್ನು ಚಲಾಯಿಸುವ ಜೊತೆಗೆ ಸರ್ಕಾರದಿಂದ ಬರುವ ಔಷಧಿಗಳನ್ನು ಸಹ ನೀಡುತ್ತಿಲ್ಲ. ಬರುವ ಔಷಧಿಗಳನ್ನು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಖಾಸಗಿ ಪಶು ಮೆಡಿಕಲ್ ಸ್ಟೋರ್‌ಗಳಿಗೆ ಮಾರಾಟ ಮಾಡುವ ಮುಖಾಂತರ ಕೋಟಿಕೋಟಿ ಲೂಟಿ ಮಾಡುವ ಪಶು ಇಲಾಖೆಯಾಗಿ ಮಾರ್ಪಟ್ಟಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ನಾನಾ ರೋಗಗಳಿಗೆ ತುತ್ತಾಗಿ ರಾಸುಗಳು ಮೃತಪಟ್ಟರೆ ಸಂಬಂಧಪಟ್ಟ ಪಶು ಇಲಾಖೆಯ ವೈದ್ಯರು ಮತ್ತು ಅಧಿಕಾರಿಗಳಿಗೆ ಕರೆ ಮಾಡಿದರೆ ರೈತರ ಮೇಲೆಯೇ ದೌರ್ಜನ್ಯ ಮಾಡಿ ಇಲಾಖೆಯಲ್ಲಿ ನೀವು ಕರೆದಾಗ ಬರುವುದಕ್ಕೆ ನಾವೇನು ನೀವು ಇಟ್ಟಿರುವ ಆಳುಗಳಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ನೀವೇ ರಾಸುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಫೋಟೋ ಕಳುಹಿಸಿ ಸರಕಾರಕ್ಕೆ ಕಳುಹಿಸುತ್ತೇವೆ. ನಿಮ್ಮ ಹಣೆಬರಹ ಚೆನ್ನಾಗಿದ್ದರೆ ವಿಮೆ ಹಣ ಬಿಡುಗಡೆಯಾಗುತ್ತದೆ ಎಂದು ಬೇಜವಾಬ್ದಾರಿ ಉತ್ತರ ನೀಡುವ ಮುಖಾಂತರ ರಾಸುಗಳ ಸಾಕುವ ರೈತರಿಗೆ ಬರಬೇಕಾದ ಸರಕಾರದ ಹಣಕ್ಕೂ ಪಶು ವೈದ್ಯರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.
ಒಂದು ಕಡೆ ಸಿಬ್ಬಂದಿ ಕೊರತೆ ಮತ್ತೊಂದು ಕಡೆ ಪಶು ವೈದ್ಯರ ಬೇಜವಾಬ್ದಾರಿಯಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿ ಮಾಡಿ ಸಾಕಾಣಿಕೆ ಮಾಡುತ್ತಿರುವ ಹೈನೋದ್ಯಮ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಆ ಉದ್ಯಮವೂ ಸಹ ನಷ್ಟದ ಹಾದಿಗೆ ತಲುಪುವ ಮಟ್ಟಕ್ಕಿದೆ ಹೀಗಾಗಿ ಕೂಡಲೇ ಪಶು ಇಲಾಖೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಿ ಗಡಿಭಾಗದ ಗ್ರಾಮೀಣ ಪ್ರದೇಶಗಳಲ್ಲಿ ರಾಸುಗಳಿಗೆ ಬಾಧಿಸುವ ರೋಗಗಳ ನಿಯಂತ್ರಣಕ್ಕೆ ವಿಶೇಷ ಪಶು ವೈದ್ಯರ ತಂಡ ರಚನೆ ಮಾಡುವ ಮುಖಾಂತರ ಹೈನೋದ್ಯಮದ ಉಳಿವಿಗೆ ಸಹಕರಿಸಬೇಕೆಂದು ಪಶು ಇಲಾಖೆ ಮುತ್ತಿಗೆ ಹಾಕುವ ನಿರ್ದಾರವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಚಾಂದ್‌ಪಾಷ, ಮುನಿಯಪ್ಪ, ಬಾವರಹಳ್ಳಿ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಸುರೇಶ್, ಲಕ್ಷಣ್, ತಿಮ್ಮಣ್ಣ, ದಿನೇಶ್, ರಾಮಸಾಗರ ವೇಣು, ಸುರೇಶ್‌ಬಾಬು, ಬಾಬು ಮುಂತಾದವರಿದ್ದರು.