ಹೈನು ರೈತರ ಅಭ್ಯುದಯಕ್ಕೆ ಸರ್ಕಾರ ಸದಾ ಬದ್ಧ; ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭರವಸೆ

ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ರಾಜ್ಯದ ಹೈನು ರೈತರ ಹಿತ ಕಾಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.

ದೇವನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಬಹು ಹಾಲು ಒಕ್ಕೂಟಗಳ ವತಿಯಿಂದ ಹಾಲು ಉತ್ಪಾದಕ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಶೇಖರಣೆ ಮಾಡುತ್ತಿರುವುದು ಬಮೂಲ್ ಸಂಸ್ಥೆಯಾಗಿದ್ದು, ಈ ಖ್ಯಾತಿಗೆ ಪಾತ್ರರಾದ ಎಲ್ಲ ಹೈನು ರೈತರ ಶ್ರಮ ಅಭಿನಂದನೀಯ ಎಂದರು.

ಕುಸಿತ ಕಂಡ ಹಾಲು ಉತ್ಪಾದನೆ

ಈ ಹಿಂದೆ ಪ್ರತಿನಿತ್ಯ 15 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ ಇದೀಗ 13 ಲಕ್ಷಕ್ಕೆ ಕುಸಿತ ಕಂಡಿದೆ. ದೇವನಹಳ್ಳಿ ತಾಲೂಕಿನಲ್ಲಿ ದಿನಕ್ಕೆ 1.4 ಲಕ್ಷ ಲೀಟರ್ ಗೆ ಹಾಲು ಉತ್ಪಾದನೆಯಾಗುತ್ತಿದ್ದು, 163 ಕಾರ್ಯನಿರತ ಹಾಲು ಉತ್ಪಾದಕ ಸಂಘಳಿವೆ. ಈ ಎಲ್ಲ ಸಂಘಗಳಿಂದ ಒಟ್ಟು 13,320 ರೈತರು ಹೈನುಗಾರಿಕೆ ಎಂಬ ಉಪ ಕಸುಬಿನಲ್ಲಿ ತೊಡಗಿದ್ದಾರೆ ಎಂದು ಸಚಿವರು ವಿವರಿಸಿದರು.

ಹೈನುಗಾರಿಕೆಗೆ ಪ್ರೋತ್ಸಾಹ

ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆಯಿಂದ ಈ ಭಾಗದಲ್ಲಿ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಹೈನು ರೈತರಿಗೆ ಪ್ರೋತ್ಸಾಹಧನ ನೀಡುತ್ತಿರುವುದು ಇಡೀ ದೇಶದಲ್ಲಿಯೇ ರಾಜ್ಯ ಮಾತ್ರ. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರೋತ್ಸಾಹ ಧನ ನೀಡುವುದನ್ನು ಆರಂಭಿಸಿದರು, ನಂತರದ ಸರ್ಕಾರಗಳು ಹೆಚ್ಚಿಸಿದವು. ಈಗ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರುಪಾಯಿ ನೀಡುತ್ತಿದೆ ಎಂದರು.

ಹಾಲಿನ ಬೆಲೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಾರಾಟ ಮಾಡುತ್ತಿರುವುದು ಕಡಿಮೆ ಬೆಲೆಗೆ, ಕೋವಿಡ್ ಸಂದರ್ಭದಲ್ಲಿ ಹಾಲಿನ ಬೆಲೆ ಹೆಚ್ಚಿಸಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷದಿಂದ ಹಾಲಿನ ಬೆಲೆ ಹೆಚ್ಚಿಸದೆ ಒಂದೇ ಸಲ 5 ರುಪಾಯಿ ಹೆಚ್ಚಿಸಿದರೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಕಡಿಮೆ ಬೆಲೆ ಏರಿಕೆ ಮಾಡಿದ್ದಾರೆ. ಖರೀದಿ ಬೆಲೆಯಿಂದಾಗಿ ರೈತರಿಗೆ ಅದಾಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದರು.

ಇಸ್ರೇಲ್ ಸ್ಫೂರ್ತಿಯಾಗಲಿ

ಶಿಕ್ಷಣದಿಂದ ಎಲ್ಲವೂ ಸಾಧ್ಯ, ಹಾಗಾಗಿ ರೈತರ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಕೃಷಿಯಲ್ಲಿ ಆಧುನಿಕ ಪದ್ಧತಿಗಳು ಬಂದಿವೆ, ತೋಟಗಾರಿಕಾ ಬೆಳೆಗಳಲ್ಲಿ ಆಧುನಿಕ ಪದ್ಧತಿ ಅನುಸರಿಸುವ ಶಿಕ್ಷಣ ಪಡೆಯಬೇಕು, ಇಸ್ರೇಲ್ ಚಿಕ್ಕ ದೇಶವಾಗಿದ್ದರೂ, ಕಡಿಮೆ ಪ್ರಮಾಣದ ಮಳೆಯಾಗುತ್ತಿದ್ದರೂ ಅಲ್ಲಿ ಕೃಷಿ ಮತ್ತು ತೋಟಗಾರಿಕೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಹೇಳಿದರು.

ರೈತ ವಿದ್ಯಾನಿಧಿ ಯೋಜನೆಯಡಿ ರಾಜ್ಯದ ಒಟ್ಟು 10.5 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ, ರೈತರಿಗೆ ನೀಡಬೇಕಾದ ಎಲ್ಲ ಕಾರ್ಯಕ್ರಮ ಸರ್ಕಾರ ನೀಡುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಲಾಭ ತಂದುಕೊಡುವ ಕ್ರಮಗಳತ್ತ ಸರ್ಕಾರ ನಿರಂತರವಾಗಿ ಗಮನ ಹರಿಸುತ್ತಿದೆ ಎಂದು ಹೇಳಿದರು.

ಜೀವನದಲ್ಲಿ ಎಲ್ಲರೂ ಯಶಸ್ವಿಯಾಗಬೇಕು, ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನಿಪುಣರಾಗುವಂತೆ ಸಚಿವರು ಹಾರೈಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ಶ್ರೀನಿವಾಸ್, ಕೃಷ್ಣಯ್ಯ, ಜಯಚಂದ್ರ ಗೌಡ, ಶ್ರೀನಿವಾಸ್, ಸುಧಾಕರ್, ಡಾ.ಎಂ. ಗಂಗಯ್ಯ, ವೆಂಕಟಸ್ವಾಮಿ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *