ಯಲಹಂಕ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೋಟಿ ಕೋಟಿ ಬೆಲೆ ಬಾಳುವ ಜಮೀನು, ಇಂತಹ ಜಮೀನಿನ ಮೇಲೆ ಭೂಗಳ್ಳರ ವಕ್ರದೃಷ್ಟಿ ಬಿದ್ದಿದೆ, ಕೋರ್ಟ್ ನಲ್ಲಿ ದಾಯಾದಿಗಳ ಭಾಗಾಂಶದ ಬಗ್ಗೆ ಕೇಸ್ ನಡೆಯುತ್ತಿದ್ದರೂ, ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ನ ತಡೆಯಾಜ್ಞೆ ಆದೇಶ ಇದ್ದರೂ, ಆದೇಶ ಉಲ್ಲಂಘನೆ ಮಾಡಿ ಬೇರೆಯವರಿಗೆ ಖಾತೆ ಮಾಡಿರೋ ಯಲಹಂಕ ಕಂದಾಯ ಇಲಾಖೆಯ ಅಧಿಕಾರಿಗಳು.
ಯಲಹಂಕ ತಾಲೂಕು ಜಾಲ ಹೋಬಳಿಯ ಕಾಡಯರಪ್ಪನಹಳ್ಳಿಯ ನಿವಾಸಿ ಕೆ.ಗೋವಿಂದರಾಜು ಪೂರ್ವಜರಿಂದ ಬಂದ ಜಮೀನು ಉಳಿಸಿಕೊಳ್ಳಲು ಕೋರ್ಟ್ ಕಚೇರಿ ಅಲೆಯುತ್ತಿದ್ದಾರೆ, ಇವರ ಮೂವರು ತಾತಂದಿರು ಒಟ್ಟಿಗೆ 1953ರಲ್ಲಿ ಪಕ್ಕದ ಹುಣಸೂರು ಗ್ರಾಮದಲ್ಲಿ ಜಮೀನು ಖರೀದಿ ಮಾಡಿದ್ದರು, ತಾತನ ನಂತರ ಜಮೀನುಗಳು ಗೋವಿಂದರಾಜುರವರ ದೊಡ್ಡಪ್ಪನವರಾದ ಮುನಿವೆಂಕಟ್ಟನವರ ಹೆಸರಿಗೆ ಖಾತೆಯಾಗಿರುತ್ತೆ, ಇದಕ್ಕೆ ಕುಟುಂಬದವರ ಸಮ್ಮತಿ ಇದ್ದು ಹೊಂದಾಣಿಕೆಯಿಂದ ಜಮೀನುಗಳಲ್ಲಿ ಕೃಷಿ ಮಾಡುತ್ತಿರುತ್ತಾರೆ, ಮುನಿವೆಂಕಟಪ್ಪನವರ ನಿಧನದ ನಂತರ ಅವರ ಇಬ್ಬರು ಪತ್ನಿಯರಾದ ಲಕ್ಷಮ್ಮ ಮತ್ತು ನಾಗಲಕ್ಷಮ್ಮನವರಿಗೆ ಹೆಸರುಗಳಿಗೆ ಜಂಟಿ ಖಾತೆ ಮಾಡಲಾಗುತ್ತದೆ. ಸರ್ವೆ ನಂಬರ್ 57ರ 2 ಎಕರೆ 18 ಗುಂಟೆ ಜಾಗದಲ್ಲಿ ಲಕ್ಷಮ್ಮ ಮತ್ತು ನಾಗಲಕ್ಷಮ್ಮ ಸ್ವಾಧೀನದಲ್ಲಿದ್ದು, ಈ ಜಮೀನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿದ್ದರಿಂದ, 2006ರಲ್ಲಿ ಪರಿಹಾರವಾಗಿ 50 ಲಕ್ಷವನ್ನ ಪಡೆದು ಕೊಂಡಿದ್ದರು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಗೋವಿಂದರಾಜು ಸದ್ಯ ತಮ್ಮ ತಂದೆ ಕೃಷ್ಣಪ್ಪ ಸಾಗುವಳಿ ಮಾಡುತ್ತಿದ್ದ ಸರ್ವೆ ನಂಬರ್ 95ರ 2 ಎಕರೆ 36 ಗುಂಟೆ ಜಾಗದಲ್ಲಿ ಕೃಷಿ ಮಾಡುತಿದ್ದಾರೆ, ಆದರೆ ಈ ಜಾಗದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಸಾತನೂರು ದಾನೇಗೌಡನ ಕಣ್ಣು ಬಿದ್ದಿದೆ, ಇದೇ ದಾನೇನೇಗೌಡ ಅನಕ್ಷರಸ್ಥರು ಮತ್ತು ಕೋರ್ಟ್ ಕಚೇರಿಯ ತಿಳುವಳಿಕೆ ಇಲ್ಲದ ಲಕ್ಷಮ್ಮ ಮತ್ತು ನಾಗಲಕ್ಷಮ್ಮನವರ ತಲೆಕೆಡೆಸಿ ಈ ಜಾಗವನ್ನ ಆನಂದ ಎಂಬುವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ, ಜಮೀನು ಮಾರಾಟದ ಹಣವನ್ನು ಲಕ್ಷಮ್ಮ ಮತ್ತು ನಾಗಲಕ್ಷಮ್ಮರಿಗೆ ಕೊಟ್ಟಿಲ್ಲ ಎಂದು ಗೋವಿಂದರಾಜುರವರ ಆರೋಪವಾಗಿದೆ.
ಗೋವಿಂದರಾಜುವರ ಪೂರ್ವಜನ ಜಮೀನುಗಳ ಭಾಗಾಂಶಕ್ಕಾಗಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ, ಮತ್ತು ಗೋವಿಂದರಾಜು ತಾವು ಸ್ವಾಧೀನದಲ್ಲಿ ಜಮೀನು ನೋಂದಣಿ ಮಾಡದಂತೆ ಚಿಕ್ಕಜಾಲದ ಸಬ್ ರಿಜಿಸ್ಟರ್ ಕಛೇರಿಗೆ ದೂರು ನೀಡಿದ್ದಾರೆ, ಆದರೂ ಸಬ್ ರಿಜಿಸ್ಟರ್ ಸ್ವರ್ಣಲತಾ ನೋಂದಣಿ ಮಾಡಿದ್ದಾರೆ, ಇದರ ಜೊತೆಗೆ ಹೈಕೋರ್ಟ್ ನಲ್ಲಿ ಖಾತೆ ಬದಲಾವಣೆ ಮಾಡದಂತೆ ಕೇಸ್ ಹಾಕಿದ್ದರು, ಹೈಕೋರ್ಟ್ ಜುಲೈ 31ರಂದು ಯಥಾಸ್ಥಿತಿ ಕಾಪಾಡುವಂತೆ ತಡೆಯಾಜ್ಞೆ ಆದೇಶ ನೀಡಿತ್ತು.
ತಡೆಯಾಜ್ಞೆಯ ಆದೇಶವನ್ನ ಕಂದಾಯ ಅಧಿಕಾರಿಗಳಿಗೆ ತಲುಪಿಸಿದ್ದಾರೆ ಗೋವಿಂದರಾಜು, ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳಾದ ಯಲಹಂಕದ ವಿಶೇಷ ತಹಶೀಲ್ದಾರ್ ಶಿವಕುಮಾರ್, ಶಿರಸ್ತೇದಾರರಾದ ರಾಜು, ರೆವಿನ್ಯೂ ಇನ್ಸ್ ಪೆಕ್ಟರ್ ಪ್ರಕಾಶ್ ಸೇರಿಕೊಂಡು ಆಗಸ್ಟ್ 7ರಂದು ಜಮೀನನ್ನು ಆನಂದ ಎಂಬುವರ ಹೆಸರಿಗೆ ಖಾತೆ ಮಾಡುವ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸಿರುವ ಬಗ್ಗೆ ಗೋವಿಂದರಾಜು ಆರೋಪ ಮಾಡಿದ್ದಾರೆ.