ಹೇಮಂತ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಮತ್ತು ಮತ್ತೊಬ್ಬ ಆರೋಪಿಯನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಪತ್ತೆಗಾಗಿ 10 ತಂಡಗಳನ್ನ ಪೊಲೀಸರು ನಿಯೋಜನೆ ಮಾಡಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 10 ರಂದು ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿಯ ಜೆಪಿ ಪ್ಯಾಲೇಸ್ ಬಳಿ ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದ್ದು, ಮುಂಜಾನೆ ವೇಳೆ ನವೋದಯ ಶಾಲೆ ಬಳಿ ಹಲ್ಲೆಗೊಳಗಾಗಿದ್ದ ಹೇಮಂತ್ ಗೌಡನ ಶವ ಪತ್ತೆಯಾಗಿತ್ತು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ತಂದೆ ಶಶಿಕುಮಾರ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಮೇಡಹಳ್ಳಿಯ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಮತ್ತು ಆತನ ಜೊತೆಯಲ್ಲಿದ್ದ 9 ಜನರ ತಂಡ ತನ್ನ ಮಗನನ್ನು ಕೊಲೆ ಮಾಡಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದರು.
ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದರು, ಆರೋಪಿಗಳ ಪತ್ತೆಗಾಗಿ 10 ಪೊಲೀಸ್ ತಂಡಗಳ ರಚನೆ ಮಾಡಲಾಗಿದ್ದು, ಇಂದು ಕೋರ್ಟ್ ನಲ್ಲಿ ಶರಣಾಗುವುದಕ್ಕೆ ಆರೋಪಿಗಳು ಬರುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳಾದ ನರಸಿಂಹಮೂರ್ತಿ ಮತ್ತು ಮತ್ತೊಬ್ಬನನ್ನು ಬಂಧಿಸಿರುವುದಾಗಿ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿಯವರು ತಿಳಿಸಿದ್ದಾರೆ.
‘ಎನ್ ಕೌಂಟರ್ ನಡೆದಿಲ್ಲ’, ‘ಸತ್ಯಕ್ಕೆ ದೂರವಾದ ಸುದ್ದಿ’
ಅದೇರೀತಿ, ಬಾಶೆಟ್ಟಿಹಳ್ಳಿಯ ನವೋದಯ ಶಾಲೆ ಸಮೀಪ ನಡೆದಿದ್ದ ಯುವಕನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಇಂದು ಮಧ್ಯಾಹ್ನ ಎನ್ ಕೌಂಟರ್ ಮಾಡಲಾಗಿದೆ ಎಂಬ ಸುದ್ದಿಯನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಪ್ರಕರಣದ ಎ1 ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಎಂಬಾತನನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಎನ್ ಕೌಂಟರ್ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿತ್ತು.
ಎನ್ ಕೌಂಟರ್ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿತು. ಈ ಕುರಿತ ಸುದ್ದಿಗೆ ಸ್ಪಷ್ಟೀಕರಣ ನೀಡಿದ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು, ಎನ್ ಕೌಂಟರ್ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.