ಹೇಮಂತ್ ಗೌಡ ಕೊಲೆ ಪ್ರಕರಣದ A2 ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು: ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆ ಯತ್ನ: ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

ಹೇಮಂತ್ ಗೌಡ ಕೊಲೆ ಪ್ರಕರಣದ ಎ2 ಆರೋಪಿಯಾದ ರೌಡಿಶೀಟರ್ ಶ್ರೀನಿವಾಸ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ರಾಜಾನುಕುಂಟೆ ಸಮೀಪದ ಶ್ರೀರಾಮನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ 6:45ರ ಸಮಯದಲ್ಲಿ ನಡೆದಿದೆ.

ಇಂದು‌ ಬೆಳಗ್ಗೆ ಖಚಿತ ಮಾಹಿತಿ ಮೆರೆಗೆ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾದ ಶ್ರೀನಿವಾಸ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆ ಯತ್ನ ಮಾಡಿದಾಗ ಆತ್ಮರಕ್ಷಣೆಗಾಗಿ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎನ್ನಲಾಗಿದೆ.

 ಗಾಯಾಳು ಆರೋಪಿಯನ್ನು ಬಾಶೆಟ್ಟಿಹಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಪಿ.ರವಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಬಾಶೆಟ್ಟಿಹಳ್ಳಿಯ ನವೋದಯ ಶಾಲೆ ಸಮೀಪ‌ ಮೇ 11 ರಂದು ಹುಸ್ಕೂರು ನಿವಾಸಿ ಹೇಮಂತ್ ಗೌಡ ಎಂಬಾತನನ್ನು ಮೇಡಹಳ್ಳಿಯ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಹಾಗೂ ಆತನ ಸಹಚರರು ಭೀಕರವಾಗಿ ಹತ್ಯೆ ಮಾಡಿದ್ದರು. ಹೇಮಂತ್ ಗೌಡನನ್ನು ಹತ್ಯೆ ಮಾಡಿ ವಾಹನವೊಂದರಲ್ಲಿ ಶವದ ಜೊತೆ ಆರೋಪಿಗಳು ರೌಂಡ್ಸ್ ಹಾಕಿದ್ದರು.

ಮೇ. 11ರಂದು ಹೇಮಂತ್ ಗೌಡ ಎಂಬ ಯುವಕನನ್ನು ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ಅವರು ಈ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡು, ಕೊಲೆ ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆನನ್ನ ಇತ್ತೀಚೆಗೆ ಬಂಧಿಸಿದ್ದರು. ಇಂದು ಬೆಳಗ್ಗೆ ಸುಮಾರು 6:45 ರ ಸಮಯದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಶ್ರೀನಿವಾಸ್ ರಾಜಾನುಕುಂಟೆಯ ಶ್ರೀರಾಮನಹಳ್ಳಿ ಗೇಟ್ ಬಳಿ ಇರುವುದನ್ನು ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ಕೂಡಲೇ ಆತನನ್ನು ಬಂಧನ ಮಾಡಲು ಹೋಗಿದ್ದಾರೆ. ಆತ ಶ್ರೀರಾಮನಹಳ್ಳಿ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದನು, ಆಗ ಪೊಲೀಸರು ಆತನನ್ನು ಬಂಧಿಸಲು ಹೋದಾಗ ಆರೋಪಿ ಕಲ್ಲು ತೆಗೆದುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಲ್ಲದೇ, ಹೆಡ್ ಕಾನ್ಸ್ ಸ್ಟೇಬಲ್ ಚಂದ್ರಶೇಖರ್ ಎಂಬುವವರಿಗೆ ಚಾಕುವಿನಿಂದ ಕೈಗೆ ಗಾಯಗೊಳಿಸಿ ಕೊಲೆ ಮಾಡಲು ಮುಂದಾಗುತ್ತಾನೆ, ಆಗ ಇನ್ಸ್ ಪೆಕ್ಟರ್ ಸಾದಿಕ್ ಪಾಷ ಅವರು ಏರ್ ಫೈರ್ ಮಾಡಿ ಆರೋಪಿಗೆ ಎಚ್ಚರಿಕೆ ನೀಡಿದರೂ ಸಹ ಪೊಲೀಸ್ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾನೆ. ಆಗ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ‌ ಬಾಲದಂಡಿ ಅವರು ಮಾಹಿತಿ ನೀಡಿದ್ದಾರೆ.

ಆರೋಪಿ ಶ್ರೀನಿವಾಸ್ ಹಾಗೂ ಗಾಯಗೊಂಡ ಹೆಡ್ ಕಾನ್ಸ್ ಸ್ಟೇಬಲ್ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಶ್ರೀನಿವಾಸ್ ಎ2 ಆರೋಪಿಯಾಗಿದ್ದಾನೆ. ಈತನ ಮೇಲೆ ರೌಡಿಶೀಟರ್ ಸಹ ಇದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *