ಆ ಹೆದ್ದಾರಿ ರಸ್ತೆ ನಿರ್ಮಾಣ ಆಗಿ ಕೇವಲ ಒಂದು ವರ್ಷ ಮಾತ್ರ ಆಗಿದೆ. ಮೊದಲು ರಸ್ತೆ ಉದ್ಘಾಟನೆ ಆಯಿತಲ್ಲಾ ಅಂತ ಸಂತೋಷದಿಂದ ಇದ್ದ ಜನರು ಈಗ ಹಿಡಿ ಶಾಪ ಹಾಕುವಂತೆ ಆಗಿದೆ. ಸುಲಭವಾಗಿ ಮನೆ ಸೇರುತ್ತೇವೆ ಎಂದು ಕೊಂಡವರು ಅಪಘಾತಕ್ಕೆ ತುತ್ತಾಗಿ ಕೈಕಾಲು ಮುರಿದುಕೊಂಡು, ತಲೆಬುರುಡೆ ಹೊಡೆದುಕೊಂಡು ಆಸ್ಪತ್ರೆ ಪಾಲಾದರೆ, ಇನ್ನೂ ಕೆಲವರು ದೇವರ ಪಾದ ಸೇರುತ್ತಿದ್ದಾರೆ. ಅಷ್ಟಕ್ಕೂ ಆ ಹೆದ್ದಾರಿ ರಸ್ತೆಯಲ್ಲಿ ಏನಾಗುತ್ತಿದೆ, ಎಲ್ಲಿ ಅಂತಿರಾ ಈ ಸ್ಟೋರಿ ಓದಿ………
ಹೌದು ರಾಷ್ಟ್ರೀಯ ಹೆದ್ದಾರಿ 648ರ ದಾಬಸ್ ಪೇಟೆ -ಹೊಸಕೋಟೆ ರಸ್ತೆಯಲ್ಲಿ ಹುಲಿಕುಂಟೆ ಟೋಲ್ ಪ್ರಾರಂಭ ಆಗಿ ಕೇವಲ ಒಂದು ವರ್ಷ ಮಾತ್ರ ಆಗಿದೆ. ಈ ರಸ್ತೆ ಮೂಲಕ ಸಂಚಾರ ಮಾಡುವ ಪ್ರತಿಯೊಂದು ವಾಹನದಿಂದ ಟೋಲ್ ಸಂಗ್ರಹ ಮಾಡುತ್ತಾರೆ. ಆದರೆ, ಸವಾರರಿಗೆ ಮಾತ್ರ ಸರಿಯಾದ ವ್ಯವಸ್ಥೆಗಳನ್ನು ಮಾಡುತ್ತಿಲ್ಲ. ಗೀತಂ ಯೂನಿವರ್ಸಿಟಿ ಯಿಂದ ಹುಲಿಕುಂಟೆ ಟೋಲ್ ವರೆಗೆ ರಸ್ತೆಯಲ್ಲಿ ಸಾಕಷ್ಟು ಕಡೆ ಉಬ್ಬು ತಗ್ಗುಗಳಿವೆ. ಹಾಗಾಗಿ ವಾಹನಗಳು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಆಗುತ್ತಿವೆ. ವಿಭಜಕಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಳು ಒಣಗುತ್ತಿವೆ. ಇರಬೇಕಾದ ಸ್ಥಳಗಳಲ್ಲಿ ಸೂಚನಾ ಫಲಕಗಳಿಲ್ಲ. ಇನ್ನೂ ಹಲವಾರು ನ್ಯೂನ್ಯತೆಗಳು ಇರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ( ಪ್ರವೀಣ್ ಶೆಟ್ಟಿ ಬಣ) ರವಿ ರಾಜಘಟ್ಟ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇನ್ನೂ ರಸ್ತೆಯ ಉಬ್ಬು ತಗ್ಗುಗಳು ಕಾಣದೆ ಕಳೆದ ಒಂದು ವಾರದ ಹಂತರದಲ್ಲಿ 15 ಕ್ಕೂ ಹೆಚ್ಚು ಜನರು ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಜೊತೆಗೆ ಇಬ್ಬರು ಪ್ರಾಣವನ್ನೂ ಬಿಟ್ಟಿದ್ದಾರೆ. ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದರೆ, ಹೆದ್ದಾರಿಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮೈಸೂರು ರಸ್ತೆ ಸಮಸ್ಯೆ ಆದಾಗ ಇಡೀ ಸರಕಾರವೇ ಅದರ ಬಗ್ಗೆ ಗಮನಹರಿಸಿತ್ತು. ಆದರೆ, ಈಗ ಇಷ್ಟು ಅಪಘಾತಗಳು ಸಂಭವಿಸುತ್ತಿವೆ. ಇಷ್ಟಾದರೂ ಯಾವುದೇ ಸೂಕ್ತ ಕ್ರಮಗಳು ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಟೋಲ್‌ನ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತಿಲ್ಲ. ಯಾವಾಗಲೂ ಟೋಲ್ ನ ಬಳಿಯೇ ಇರುತ್ತದೆ. ಹಾಗಾಗಿ ಅಪಘಾತ ಆದಾಗ ಖಾಸಗಿ ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಬಂದು, ಉಪಚರಿಸುವ ನೆಪದಲ್ಲಿ ಬಡವರ ಜೇಬು ಖಾಲಿ ಮಾಡಿಸುತ್ತಿವೆ. ಹಾಗಾಗಿ ನಗರ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಇರಬೇಕು ಎಂದು ಕರವೇ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.
ಒಂದು ವೇಳೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದರ ಜೊತೆಗೆ ರಸ್ತೆ ತಡೆದು, ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಹೊಸ ಹೆದ್ದಾರಿ ರಸ್ತೆ ಸಾವಿನ ರಸ್ತೆಯಾಗಿ ಹೆಸರು ಮಾಡುತ್ತಿದೆ. ಇನ್ನಾದರೂ ಟೋಲ್ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಿ ಅಪಘಾತಗಳಿಗೆ ಕಡಿವಾಣ ಹಾಕುತ್ತಾರಾ ಕಾದು ನೋಡಬೇಕಿದೆ……